ಬೆಂಗಳೂರು: ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದನ್ನು ಯಾವ ದುಷ್ಟಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಪಂಚ ರಾಜ್ಯಗಳ ಚುನಾವಣೆಯಲ್ಲಿಯೇ ದೇಶ ಹಾಗು ರಾಜ್ಯದ ಜನತೆಗೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಹೋಟೆಲ್ ರಮಾಡದಲ್ಲಿ ಇಂದು ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರಾಜ್ಯದ ಮತದಾರರು ಸಜ್ಜಾಗಿದ್ದಾರೆ. ಬಿಜೆಪಿ, ಸಂಘಟನೆಗೆ, ಪೂರಕ ಕ್ರಮಗಳನ್ನು ಪಕ್ಷ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು. ಪಕ್ಷವು ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು.
ಈಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಗೆದ್ದಿದೆ. ಇದೊಂದು ಸ್ಪಷ್ಟ ಸಂದೇಶವಾಗಿದೆ. ದೇಶ- ರಾಜ್ಯದ ಜನರು, ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷದ ಗಿಮಿಕ್ ಗ್ಯಾರಂಟಿಯನ್ನು ನಂಬಲು ತಯಾರಿಲ್ಲ. ಇದರಿಂದ ಮೋದಿ ಗ್ಯಾರಂಟಿಯೇ ಶ್ರೇಷ್ಠ ಎಂದು ಪ್ರಜ್ಞಾವಂತ ಮತದಾರರಿಗೆ ಅರಿವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಮೋದಿಜೀ ಮೂರನೇ ಬಾರಿ ಪ್ರಧಾನಮಂತ್ರಿ ಆಗಲಿದ್ದು, ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಅಸಮರ್ಥ, ಅಸಮರ್ಪಕ ಆಡಳಿತದಿಂದ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪನ್ಮೂಲ ಕ್ರೋಡೀಕರಣದ ವಿಚಾರದಲ್ಲಿ ಪೂರ್ಣಪ್ರಮಾಣದಲ್ಲಿ ವಿಫಲವಾಗಿದ್ದಾರೆ. ಇದರಿಂದ ಭೀಕರ ಬರಗಾಲ, 500 ರೈತರ ಆತ್ಮಹತ್ಯೆ ಹೊರತಾಗಿಯೂ ರಾಜ್ಯ ಸರ್ಕಾರವು ಪರಿಹಾರ ಕೊಡದೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಹಿಂದಿನ ಸಿಎಂ ಯಡಿಯೂರಪ್ಪ ಅವರು ಅತಿವೃಷ್ಟಿಯಾಗಿದ್ದಾಗ ತಕ್ಷಣ ಸ್ಪಂದಿಸಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕೃತಿ ವಿಕೋಪಕ್ಕೆ ಕೂಡಲೇ ಸ್ಪಂದಿಸಿದ್ದನ್ನು ಜನರು ಮರೆತಿಲ್ಲ. ಈ ಸರ್ಕಾರವು ಎಸ್‍ಸಿ, ಎಸ್‍ಟಿಗಳಿಗೆ ಮೀಸಲಿಟ್ಟ ಹಣವನ್ನೂ ಬೇರೆಡೆಗೆ ವರ್ಗಾಯಿಸಿ ದಲಿತರಿಗೂ ಅನ್ಯಾಯ ಮಾಡಿದೆ. ಇದಕ್ಕಾಗಿ ಜನರು ಈ ಕಾಂಗ್ರೆಸ್ ಸರ್ಕಾರವನ್ನು ಶಪಿಸುವಂತಾಗಿದೆ ಎಂದು ತಿಳಿಸಿದರು.