ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ನಾಳೆ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಲಿದೆ ಎಂದು ಮಾಜಿ ಸಿ ಎಂ ಹಾಗೂ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 12.10ಕ್ಕೆ ಬಿಎಸ್ವೈ ಆಗಮಿಸಿದರು. ನಿನ್ನೆಯಷ್ಟೇ ದೆಹಲಿಗೆ ತೆರಳಿದ್ದ ಅವರು ಇಂದು ವಾಪಸ್ ಆಗಿದ್ದಾರೆ. ಈ ವೇಳೆ ಏರ್ಪೋರ್ಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ ಪಿ ನಡ್ಡಾ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇನೆ. ನಾಳೆ ವಿರೋಧ ಪಕ್ಷದ ನಾಯಕನನ್ನು ರಾಷ್ಟ್ರೀಯ ನಾಯಕರು ಘೊಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ವೀಕ್ಷಕರೆದುರು ಕರ್ನಾಟಕ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದ್ದು, ಸಂಜೆ 6 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ಸಭೆಯಲ್ಲಿ ವಿಪಕ್ಷ ನಾಯಕನ ಹೆಸರು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, "ಸದನ ಪ್ರಾಂಭವಾಗುವ ಮೊದಲೇ ವಿರೋಧ ಪಕ್ಷದ ನಾಯಕನನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದು ಗ್ಯಾರಂಟಿ ನೀಡಿದ್ದಿರಿ. ನಿಮ್ಮ ಹೈಕಮಾಂಡ್ ಕನಿಷ್ಠ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೂ ನಿಮಗೆ ಗ್ಯಾರಂಟಿ ನೀಡದಿರುವುದು ರಾಜಕೀಯ ಇತಿಹಾಸದಲ್ಲೇ ಅತ್ಯಂತ ಶೋಚನೀಯ ಸಂಗತಿ" ಎಂದು ಬಿಜೆಪಿಯ ಕಾಲೆಳೆದಿದೆ.
ಇನ್ನು ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ದೆಹಲಿಯಿಂದ ಮನ್ಸೂಕ್ ಮಾಂಡವೀಯ, ಮತ್ತು ವಿನೋಧ ತಾವಡೆ ವೀಕ್ಷಕರಾಗಿ ಬರುತ್ತಿದ್ದು, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್. ಯಡಿಯೂರಪ್ಪ ಕೂಡ ಇರಲಿದ್ದಾರೆ. ಇಬ್ಬರು ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹ ಸಾಧ್ಯತೆ ಅಥವಾ ಈಗಾಗಲೇ ನಿರ್ಣಯ ಮಾಡಿರುವ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.