ಬೆಂಗಳೂರು: ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಾಕಷ್ಟು ಪ್ರಯತ್ನ ನಡೆಸಲಿದ್ದು, ಅದನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಸರ್ಕಾರದ ಬೆನ್ನಿಗೆ ನಿಲ್ಲಬೇಕು, ಅವರ ಕಾಲದ ಹಗರಣಗಳ ದಾಖಲೆಗಳು ನಮ್ಮ ಬಳಿ ಇದ್ದು, ಅವನ್ನು ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ, ಪ್ರತಿಪಕ್ಷಗಳ ಮೇಲೆ ಅಗ್ರೆಸ್ಸಿವ್ ಆಗಿ ವಾಗ್ದಾಳಿ ನಡೆಸಬೇಕು ಎಂದು ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ಪ್ರತಿಪಕ್ಷದ ಮೇಲೆ ಇನ್ನಷ್ಟು ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡಬೇಕು. ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳು ಸಿದ್ಧ ಇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣಗಳ ದಾಖಲೆಗಳು ಎಲ್ಲಾ ರೆಡಿ ಇದೆ. ಒಂದೊಂದಾಗಿ ಹೊರ ಬಿಡಬೇಕಾದ ಸಮಯದಲ್ಲಿ ಹೊರ ಬಿಡುತ್ತೇವೆ. ಕಾಂಗ್ರೆಸ್ ಆಧಾರ ರಹಿತ ಆರೋಪಗಳಿಗೆ ಹೆದರುವ ಅಗತ್ಯವಿಲ್ಲ, ಪ್ರಧಾನಿ ಮೋದಿ ನಮ್ಮ ಮೇಲೆ ಇರಿಸಿರುವ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಆರೋಪಗಳಿಗೆ ಸದನದಲ್ಲಿಯೇ ಉತ್ತರ ಕೊಡೋಣ ಎಂದರು.
ಇದನ್ನೂ ಓದಿ:ಸದನ ಸ್ವಾರಸ್ಯ: 'ನಮ್ಮ ಕ್ಷೇತ್ರದ ದೇಗುಲಗಳಿಗೆ ಅನುದಾನ ನೀಡಿದ್ರೆ ನಿಮಗೆ ದೇವರು ಆಶೀರ್ವಾದ ಮಾಡುತ್ತಾನೆ'
ಬಜೆಟ್ ಘೋಷಿತ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಘೋಷಿಸಿರುವ ಯೋಜನೆಗಳ ಆದೇಶ ಕೂಡಲೇ ಹೊರ ಬೀಳುತ್ತದೆ. ಹಾಗಾಗಿ, ಯೋಜನೆಗಳ ಜಾರಿಗೆ ಉತ್ಸುಕರಾಗಿ ಕೆಲಸ ಮಾಡುವಂತೆ ಸಿಎಂ ಸಲಹೆ ನೀಡಿದರು.
ಸಿಎಂ ಮಾತಿನ ನಂತರ ಶಾಸಕರು ತಮ್ಮ ತಮ್ಮ ಅಹವಾಲುಗಳನ್ನು ಹೇಳಿಕೊಂಡರು. ಇದರಲ್ಲಿ ಪ್ರಮುಖವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಬಿಜೆಪಿ ಶಾಸಕರು ಒಂದು ಕಡೆ, ಪಕ್ಷ ಒಂದು ಕಡೆ ಅಂತಾ ಆಗಬಾರದು. ಎರಡೂ ಕೂಡ ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಹೋಗಬೇಕು. ಕ್ಷೇತ್ರಗಳ ಅನುದಾನ ಅಂತೂ ಬರಲೇಬೇಕು ಎಂದರು.
ಇದನ್ನೂ ಓದಿ:ಅರಣ್ಯ ಒತ್ತುವರಿ ವಿಚಾರ.. ಸದನ ಸಮಿತಿ ರಚನೆಗೆ ಸಿದ್ದರಾಮಯ್ಯ, ಹೆಚ್ಕೆ ಪಾಟೀಲ್ ಒತ್ತಾಯ
ಬೆಂಗಳೂರಿನ ಶಾಸಕರು ಮತ್ತು ಅಧಿಕಾರಿಗಳ ಸಭೆ ಕರೆಯಬೇಕು, ಮಹಾನಗರದ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಬೇಕು. ಇಲ್ಲದಿದ್ದರೆ ಕ್ಷೇತ್ರಗಳನ್ನು ಕಳೆದುಕೊಳ್ಳುವ ಸ್ಥಿತಿ ಬರಲಿದೆ ಎನ್ನುವ ಎಚ್ಚರಿಕೆ ನೀಡಿದರು.
ಬಳಿಕ ಸಚಿವ ಸ್ಥಾನಕ್ಕೆ ಆರ್ ಶಂಕರ್ ಬೇಡಿಕೆ ಇಟ್ಟರು. 'ರಾಜಕೀಯವಾಗಿ ನಾನು ಕ್ಷೇತ್ರ ಕಳೆದುಕೊಂಡೆ. ಈಗ ಸಂಪುಟ ವಿಸ್ತರಣೆ ಕೂಡ ಮಾಡುತ್ತಿಲ್ಲ, ಇನ್ನೆಷ್ಟು ದಿನ ಬೇಕು ವಿಸ್ತರಣೆ ಮಾಡಲು' ಎಂದು ತುಸು ಕೋಪದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಮಾಧಾನವಾಗಿ ಮಾತನಾಡುವಂತೆ ಶಂಕರ್ಗೆ ಶಾಸಕರು ಸಲಹೆ ನೀಡಿದರು. ಆಗ ನಾನು ನನ್ನ ದುಃಖವನ್ನು ಸಿಎಂ ಬಳಿ ಹೇಳಿಕೊಳ್ಳುತ್ತಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನನಗೆ ಅದು ಗಮನದಲ್ಲಿ ಇದೆ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಅಪಘಾತ ಪರಿಹಾರ ವಿಚಾರ: ಸಚಿವ ಮಾಧುಸ್ವಾಮಿ-ಶಿವಾನಂದ ಪಾಟೀಲ್ ನಡುವೆ ಜಟಾಪಟಿ
ಜನಸ್ಪಂದನ ಯಶಸ್ಸಿನ ಕ್ರೆಡಿಟ್ ಕೆಲವರಿಗಷ್ಟೇ ನೀಡಿದ್ದಕ್ಕೆ ಅಸಮಾಧಾನ:ದೊಡ್ಡಬಳ್ಳಾಪುರ ಜನಸ್ಪಂದನ ಸಮಾವೇಶ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಯಿತು. ನಾವೂ ಸಮಾವೇಶಕ್ಕೆ ಜರನ್ನು ತುಂಬಿಸಿದ್ದೇವೆ. ಆದರೆ ಕ್ರೆಡಿಟ್ ಮಾತ್ರ ಕೆಲವರಿಗೆ ಹೋಯಿತು. ನಾವು ಜನ ಸೇರಿಸಲು ಬೇಕು, ಕ್ರೆಡಿಟ್ ಮಾತ್ರ ಅವರಿಗಾ?, ಇನ್ನು ಮೇಲೆ ನಾವೂ ಕೂಡ ನಮ್ಮ ನಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗುತ್ತೇವೆ ಬಿಡಿ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲರ ಅಹವಾಲು ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಾವು 150 ಸೀಟು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೇ ಓಡಾಡುತ್ತಿದ್ದಾರೆ. ಅವರಿಬ್ಬರ ಓಡಾಟಕ್ಕೆ ನಾವು ವಿಚಲಿತರಾಗಬೇಕಿಲ್ಲ. ನೀವು ಯಾವುದೇ ಕಾರಣಕ್ಕೂ ಭ್ರಮನಿರಸನಕ್ಕೊಳಗಾಗುವುದು ಬೇಡ. ನೀವು ನಿಮ್ಮ ಕ್ಷೇತ್ರಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಿ, ನೀವು ಯೋಚನೆ ಮಾಡುವ ಹತ್ತು ಪಟ್ಟು ಜಾಸ್ತಿ ಕೇಂದ್ರೀಯ ನಾಯಕರು ಯೋಚಿಸುತ್ತಿರುತ್ತಾರೆ. ನಾವು ಕೂಡ ಯೋಚನೆ ಮಾಡುತ್ತಿರುತ್ತೇವೆ. ಫಲಾನುಭವಿಗಳ ಸಮಾವೇಶ ಹೆಚ್ಚು ನಡೆಸಿ, ನಾನು ನೀವು ಕರೆದಲ್ಲಿಗೆ ಬರಲು ಸಿದ್ಧನಿದ್ದೇನೆ ಎಂದು ಶಾಸಕರನ್ನು ಹುರಿದುಂಬಿಸಿದರು.
ಕತ್ತಿ ನಿಧನಕ್ಕೆ ಸಂತಾಪ: ಶಾಸಕಾಂಗ ಪಕ್ಷದ ಸಭೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಹಿರಿಯ ನಾಯಕ ಸಂಪುಟ ಸದಸ್ಯರಾಗಿದ್ದ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿ ಒಂದು ನಿಮಿಷ ಮೌನಾಚರಿಸಲಾಯಿತು.
ಇದನ್ನೂ ಓದಿ:ನೈಸ್ ಸಂಬಂಧ ಸದನ ಸಮಿತಿ ವರದಿ ಮಂಡನೆಗೆ ಪರಿಷತ್ ಜೆಡಿಎಸ್ ಸದಸ್ಯರ ಒತ್ತಾಯ