ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಚಾನ್ಸರಿ ಪೆವಿಲಿಯನ್ ಹೋಟೆಲ್‌ಗೆ ಸ್ಥಳಾಂತರ ಮಾಡಲಾಗಿದೆ.
ಸಭೆ ಬಳಿಕ ಶಾಸಕರು ಅದೇ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ವಿಧಾನಸೌಧಕ್ಕೆ ಎಲ್ಲರನ್ನೂ ಒಟ್ಟಿಗೇ ಕರೆತರಲು ನಿರ್ಧರಿಸಲಾಗಿದೆ. ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸಂಜೆ ಆರು ಗಂಟೆಗೆ ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್ನಲ್ಲಿ ನಡೆಯಲಿದೆ. ಇದಕ್ಕೂ ಮೊದಲುಮಧ್ಯಾಹ್ನ 3.30 ಕ್ಕೆ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಎಲ್ಲ ರೆಬೆಲ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ಹಿನ್ನೆಲೆ ಸಿಎಂ ಸಭೆಯೂ ಮುಂದೂಡಿಕೆಯಾಗಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಾಳೆ ಬಹುಮತ ಸಾಬೀತು ಮಾಡುವ ತಯಾರಿ ಕುರಿತು ಚರ್ಚೆ ನಡೆಸಲಾಗುತ್ತದೆ. ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಲು ಸಹ ಸಿದ್ದತೆ ನಡೆಸಲಾಗುತ್ತದೆ. ಸಂಪುಟ ರಚನೆ ಸೇರಿದಂತೆ ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ಚರ್ಚೆ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿಯ ಎಲ್ಲಾ ಶಾಸಕರ ಮೇಲೆ ನಿಗಾ ವಹಿಸಿರುವ ಸಿಎಂ, ನಾಳೆ ಬಹುಮತ ಸಾಬೀತು ಮಾಡೋಣ ಎಲ್ಲರೂ ಒಗ್ಗಟ್ಟಾಗಿರಿ, ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಬಿ.ಎಸ್.ವೈ ಸೂಚಿಸಿರುವ ಶಾಸಕರ ಮೇಲೆ ಬಸವರಾಜ ಬೊಮ್ಮಾಯಿ, ಎಂ.ಪಿ ರೇಣುಕಾಚಾರ್ಯ, ಎಸ್ ಆರ್ ವಿಶ್ವನಾಥ್ , ಮುರುಗೇಶ್ ನಿರಾಣಿ ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.