ಬೆಂಗಳೂರು: ಪ್ರತಿಪಕ್ಷ ನಾಯಕರ ಆಯ್ಕೆ ಹಿನ್ನೆಲೆ ಕರೆಯಲಾಗಿರುವ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಹೈಕಮಾಂಡ್ನಿಂದ ಆಗಮಿಸಿರುವ ವೀಕ್ಷಕರು ಅಭಿಪ್ರಾಯ ಸಂಗ್ರಹ ಕಾರ್ಯ ನಡೆಸಲಿದ್ದಾರೆ. ನಂತರ ಹೈಕಮಾಂಡ್ಗೆ ವರದಿ ಸಲ್ಲಿಸಲಿದ್ದು, ನಂತರ ಹೈಕಮಾಂಡ್ನಿಂದ ಹೆಸರು ಪ್ರಕಟವಾಗಲಿದೆ.
ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಸಭೆ ಆರಂಭಕ್ಕೂ ಮುನ್ನ ಹೋಟೆಲ್ಗೆ ಬಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅಲ್ಲಿಂದ ನಿರ್ಗಮಿಸಿದ್ದು, ಶಾಸಕಾಂಗ ಸಭೆ ಆರಂಭವಾದರೂ ಮತ್ತೆ ವಾಪಸ್ ಆಗಿಲ್ಲ. ಮತ್ತೊಬ್ಬರು ಅಸಮಾಧಾನಿತ ಶಾಸಕ ಇನ್ನುಳಿದಂತೆ ದೆಹಲಿ ಪ್ರವಾಸದಲ್ಲಿರುವ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೈರಾಗಿದ್ದು ಇತರ ನಾಯಕರು ಆಗಮಿಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಬಿಜೆಪಿ ನಾಯಕರು ಉಪಸ್ಥಿತರಿದ್ದಾರೆ.
ಸಭೆ ಕುರಿತು ಮಾಹಿತಿ ನೀಡಿದ ಆರ್.ಅಶೋಕ್, ಇಂದು ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಹೈಕಮಾಂಡ್ನ ವೀಕ್ಷಕರಾಗಿ ಆಗಮಿಸಿರುವ ನಿರ್ಮಲಾ ಸೀತಾರಾಮನ್ ಮತ್ತು ದುಶ್ಯಂತ್ ಕುಮಾರ್ ಗೌತಮ್ ಶಾಸಕರ ಅಭಿಪ್ರಾಯ ಆಲಿಸಿ ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ದೂರವಾಣಿ ಮೂಲಕ ಸಲ್ಲಿಕೆ ಮಾಡಲಿದ್ದು, ನಡ್ಡಾ ಇಂದು ರಾತ್ರಿಯೇ ಹೆಸರು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.