ಕರ್ನಾಟಕ

karnataka

ETV Bharat / state

ಕುಟುಂಬ ರಾಜಕಾರಣಕ್ಕೆ ಗುಡ್ ಬೈ ಅಂದ್ರಾ ಸಂತೋಷ್: ಅಮಿತ್ ಶಾ ಟಾರ್ಗೆಟ್ ಏನು..? - ಕರ್ನಾಟಕದಲ್ಲಿ ಮತ್ತೇ ಮುನ್ನೆಲೆಗೆ ಬಂದ ನಾಯಕತ್ವ ಬದಲಾವಣೆ ಕೂಗು

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳ ಆಡಳಿತದ ಮೂಲಕ ಹೈಕಮಾಂಡ್ ನಾಯಕರ ಗಮನ ಸೆಳೆದಿದ್ದಾರಾದರೂ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಳ್ಳದಿರುವುದು ಅವರ ವಿರುದ್ಧ ನಕಾರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತಿದೆ. ಒಂದು ಬಣ ಪರೋಕ್ಷವಾಗಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಯಲ್ಲಿ ತೊಡಗಿದ್ದರೆ ಮತ್ತೊಂದು ಬಣ ಸಿಎಂ ಬೊಮ್ಮಾಯಿ ಪರ ನಿಂತಿದೆ.

ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಗುಡ್ ಬೈ ಅಂದ್ರಾ ಸಂತೋಷ್
ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಗುಡ್ ಬೈ ಅಂದ್ರಾ ಸಂತೋಷ್

By

Published : May 1, 2022, 3:50 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಷಯ ಮುನ್ನಲೆಗೆ ಬಂದಿದ್ದು, ಗುಜರಾತ್ ಮಾದರಿ ಅನುಕರಣೆ ಹಾಗು ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ, ಹಾಲಿ ಹಿರಿಯ ಶಾಸಕರ ಬದಲು ಯುವಕರಿಗೆ ಟಿಕೆಟ್ ನೀಡುವ ಕುರಿತ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೀಡಿರುವ ಹೇಳಿಕೆ ಈಗ ಕೇಸರಿ ಪಾಳಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ನಂತರ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ಕೂಗು ಬೊಮ್ಮಾಯಿ ಬಂದರೂ ನಿಂತಿಲ್ಲ. ಎರಡು ತಿಂಗಳಿಗೊಮ್ಮೆ ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಬಂದು ಮರೆಯಾಗುತ್ತಿದೆ. ಈಗಲೂ ಇಂತಹದ್ದೇ ಚರ್ಚೆ ಮತ್ತೆ ಆರಂಭಗೊಂಡಿದೆ. ಆದರೆ, ಸ್ವಲ್ಪ ಡಿಫೆರೆಂಟ್ ಆ್ಯಂಗಲ್​ನಲ್ಲಿ ಚರ್ಚೆ ಆಗುತ್ತಿದೆ‌.

ಬಿಎಸ್​ವೈ ತಮ್ಮ ಮಗನ ಜೊತೆ

ರಾಜ್ಯಕ್ಕೂ ಅನ್ವಯ ಆಗುತ್ತಾ ನಾಯಕತ್ವ ಬದಲಾವಣೆ ಸೂತ್ರ.? 2023ರ ವಿಧಾನಸಭಾ ಚುನಾವಣೆಗೂ ಇದೇ ರೀತಿ ಮಾಸ್ಟರ್ ಪ್ಲಾನ್ ಸಿದ್ಧವಾಗ್ತಾ ಇದೆಯಾ? ಹಲವು ಹಾಲಿ‌ ಶಾಸಕರಿಗೆ ಟಿಕೇಟ್ ಕೈತಪ್ಪೋದು ಗ್ಯಾರಂಟಿ ಎನ್ನುವ ಚರ್ಚೆ ಇದೀಗ ಬಿಜೆಪಿ ಪಡಸಾಲೆಯಲ್ಲಿ ಪ್ರಚಲಿತಕ್ಕೆ ಬಂದಿದೆ.

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳ ಆಡಳಿತದ ಮೂಲಕ ಹೈಕಮಾಂಡ್ ನಾಯಕರ ಗಮನ ಸೆಳೆದಿದ್ದಾರಾದರೂ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಳ್ಳದಿರುವುದು ಅವರ ವಿರುದ್ಧ ನಕಾರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತಿದೆ. ಒಂದು ಬಣ ಪರೋಕ್ಷವಾಗಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಯಲ್ಲಿ ತೊಡಗಿದ್ದರೆ ಮತ್ತೊಂದು ಬಣ ಸಿಎಂ ಬೊಮ್ಮಾಯಿ ಪರ ನಿಂತಿದೆ. ಉತ್ತಮ ಆಡಳಿತ ನೀಡುತ್ತಿರುವ ಬೊಮ್ಮಾಯಿ ಬದಲಾವಣೆ ಸರಿಯಲ್ಲ ಎಂದು ಹೈಕಮಾಂಡ್ ನಾಯಕರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದೆ ಎನ್ನಲಾಗ್ತಿದೆ. ಕೆಲ ಹಿರಿಯ ಸಚಿವರೂ ಕೇಂದ್ರದ ನಾಯಕರಿಗೆ ಬೊಮ್ಮಾಯಿ ಬದಲಾವಣೆ ಬೇಡ ಎನ್ನುವ ಮನವಿ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಮಾಜಿ ಸಿಎಂ ಹಾಗೂ ಹಾಲಿ ಸಿಎಂ

ಇಷ್ಟೆಲ್ಲಾ ಆದರೂ ಸಿಎಂ ಬೊಮ್ಮಾಯಿಗೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸ್ವಲ್ಪವೂ ಸ್ವಾತಂತ್ರ್ಯ ನೀಡಿಲ್ಲ. ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿಗೆ ಆರು ತಿಂಗಳಿನಿಂದ ದೆಹಲಿಗೆ ಅಲೆದಾಡಿದರೂ ಸಮ್ಮತಿ ನೀಡಿಲ್ಲ, ಈಗ ಈಶ್ವರಪ್ಪ ರಾಜೀನಾಮೆಯಿಂದಾಗಿ ಸಂಪುಟದಲ್ಲಿ ಖಾಲಿ ಸ್ಥಾನಗಳ ಸಂಖ್ಯೆ 5 ಕ್ಕೇರಿದೆ. ಖಾಲಿ ಸ್ಥಾನ ಭರ್ತಿ ಮಾಡಲೂ ಒಪ್ಪಿಗೆ ಸಿಗುತ್ತಿಲ್ಲ, ಪುನಾರಚನೆ ಹೆಸರಲ್ಲಿ ಕೆಲವರನ್ನು ಬಿಟ್ಟು ಹೊಸ ಮುಖ ತೆಗೆದುಕೊಳ್ಳುವ ಚುನಾವಣಾ ಕ್ಯಾಬಿನೆಟ್ ರಚನೆಗೂ ಹೈಕಮಾಂಡ್ ನಾಯಕರು ಸಮ್ಮತಿ ನೀಡುತ್ತಿಲ್ಲ. ಇದು ಎಲ್ಲೋ ಒಂದು ರೀತಿ ನಾಯಕತ್ವ ಬದಲಾವಣೆ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ ಎನ್ನುವ ಅನುಮಾನ ಹುಟ್ಟುವಂತೆ ಮಾಡಿದೆ‌.

ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಾಯಕರ ನಡೆ:ಹಾಲಿ‌ ಶಾಸಕರು, ಕುಟುಂಬಸ್ಥರನ್ನ ಹೊರಗಿಟ್ಟು ಚುನಾವಣೆ ನಡೆಸಿ ಕೆಲವೆಡೆ ಸಫಲವಾಗಿದ್ದೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿಸಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೈಸೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾರ್ಮಿಕ ಹೇಳಿಕೆ ನೀಡಿರುವುದು ಹೈಕಮಾಂಡ್ ರಾಜ್ಯ ನಾಯಕತ್ವ ಮತ್ತು ಪಕ್ಷದಲ್ಲಿ ಬದಲಾವಣೆ ತರುವ ಚಿಂತನೆ ನಡೆಸಿದೆ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

ಬಿ ಎಸ್​ ಸಂತೋಷ್​

ಹಿಂದಿನ ಸಾಲಿನಲ್ಲಿ ಕುಳಿತ ನಾಯಕರನ್ನು ಅಲ್ಲೇ ಬಿಡಲ್ಲ, ಅವರನ್ನು ಮುಂದೆ ತರುವ ಪ್ರಯತ್ನ ಆಗಲಿದೆ. ಯುವ ಮುಖಕ್ಕೆ ಮಣೆ ಹಾಕಲಾಗುತ್ತದೆ ಎನ್ನುವ ಜೊತೆಗೆ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಹಾಡುವ ಕುರಿತು ಇಂಗಿತ ವ್ಯಕ್ತಪಡಿಸುವ ಮೂಲಕ ಬಿಜೆಪಿಯಲ್ಲಿ ಅಪ್ಪ-ಮಕ್ಕಳ ರಾಜಕಾರಣಕ್ಕೆ ಬ್ರೇಕ್ ಕುರಿತು ಮತ್ತೆ ಚರ್ಚೆ ಮುನ್ನಲೆಗೆ ಬರುವಂತೆ ಮಾಡಿದ್ದಾರೆ.

ಕುಟುಂಬ ರಾಜಕಾರಣದ ಹಿನ್ನೆಲೆ ನಾಯಕರು :ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಶಿವಮೊಗ್ಗ ಸಂಸದರಾಗಿದ್ದು, ಮತ್ತೋರ್ವ ಪುತ್ರ ಬಿ.ವೈ ವಿಜಯೇಂದ್ರ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ವಿಧಾನಸಭಾ ಟಿಕೆಟ್ ಗೂ ಯತ್ನಿಸುತ್ತಿದ್ದಾರೆ.

ಕಲಬುರಗಿ ಉಮೇಶ್ ಜಾಧವ್ ಪುತ್ರ ಅವಿನಾಶ ಜಾಧವ್ ಚಿಂಚೋಳಿ ಶಾಸಕರಾಗಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಚಿಕ್ಕೋಡಿ ಸಂಸದರಾಗಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ, ಹಿರಿಯ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ್ ಕಾರಜೋಳ ರಾಜಕೀಯದಲ್ಲಿದ್ದಾರೆ. ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ರಾಜಕೀಯ ಪ್ರವೇಶ ಮಾಡಿದ್ದು, ಚುನಾವಣಾ ರಾಜಕೀಯ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಸಹೋದರ ಹನುಮಂತ ನಿರಾಣಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮಾಜಿ ಸಂಸದರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಪುತ್ರ ಡಿ.ಎಸ್ ಅರುಣ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಬಿಜೆಪಿ ಮುಖಂಡರು

ತುಮಕೂರು ಸಂಸದ ಬಸವರಾಜ್ ಪುತ್ರ ಜ್ಯೋತಿ ಗಣೇಶ್ ತುಮಕೂರು ನಗರ ಶಾಸಕರಾಗಿದ್ದಾರೆ. ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸಹೋದರ ರಮೇಶ್ ಜಾರಕಿಹೊಳಿ‌ ಮತ್ತೆ ಸಂಪುಟ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ. ಮಾಜಿ ಸಚಿವ ಕರುಣಾಕರ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಶಾಸಕರಾಗಿದ್ದಾರೆ. ಸಚಿವ ಬಿ.ಶ್ರೀರಾಮುಲು ಸೋದರಳಿಯ ಸುರೇಶ್ ಬಾಬು ರಾಜಕೀಯದಲ್ಲಿದ್ದಾರೆ. ಹಿರಿಯ ನಾಯಕರಾಗಿದ್ದ ಮಾಜಿ ಸಚಿವ ದಿ. ಸಿ.ಎಂ ಉದಾಸಿ ಪುತ್ರ ಶಿವಕುಮಾರ ಉದಾಸಿ ಹಾವೇರಿ ಸಂಸದರಾಗಿದ್ದಾರೆ.

ಹೈಕಮಾಂಡ್ ತಂತ್ರ: ಹೀಗೆ ಕುಟುಂಬ ರಾಜಕಾರಣವನ್ನು ಟೀಕಿಸಿ ವಿರೋಧಿಸುತ್ತಲೇ ಬಂದಿರುವ ಬಿಜೆಪಿ ಸದ್ದಿಲ್ಲದಂತೆ ಕುಟುಂಬ ರಾಜಕಾರಣಕ್ಕೆ ಮೈವೊಡ್ಡಿ ನಿಂತಿದೆ. ಗಾಂಧಿ ಕುಟುಂಬದ ಹಿಡಿತದಲ್ಲಿ ಕಾಂಗ್ರೆಸ್, ದೇವೇಗೌಡರ ಕುಟುಂಬದ ಹಿಡಿತದಲ್ಲಿ ಜೆಡಿಎಸ್ ಎಂದು ಟೀಕಿಸಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಇದೀಗ ತನ್ನದೇ ನಾಯಕರ ಕುಟುಂಬ ಸದಸ್ಯರನ್ನು ರಾಜಕೀಯಕ್ಕೆ ಸೇರಿಸಿಕೊಂಡು ಮತ್ತೊಂದು ರೀತಿಯ ಕುಟುಂಬ ರಾಜಕಾರಣಕ್ಕೆ ಅವಕಾಶ ಕಲ್ಪಿಸಿದೆ. ಈ ಸಂಸ್ಕೃತಿ ಮುಂದಿನ ಚುನಾವಣೆಯಲ್ಲಿ ಮಾರಕವಾಗಬಹುದು ಎನ್ನುವ ಕಾರಣಕ್ಕೆ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ಹೇಳಿಕೆ ಹೊರಬರುವಂತೆ ಪಕ್ಷದ ಹೈಕಮಾಂಡ್ ತಂತ್ರ ರೂಪಿಸಿದೆ. ಹಾಗಾಗಿಯೇ ಬಿ.ಎಲ್ ಸಂತೋಷ್ ಇಂತಹ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ.

ಮೈಸೂರಿನಲ್ಲಿ ಬಿ ಎಲ್ ಸಂತೋಷ್ ಹೇಳಿಕೆ ವಿಚಾರ ಕುರಿತು ಆರ್.ಟಿ ನಗರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಬಿ ಎಲ್ ಸಂತೋಷ್ ಅವರು ಹೇಳಿದ್ದು ಸರಿ ಇದೆ. ಕಾರ್ಪೊರೇಷನ್‌ಗಳ ಚುನಾವಣೆ ಕುರಿತು ಬಿ ಎಲ್ ಸಂತೋಷ್ ಮಾತಾಡಿದ್ದಾರೆ ಎಂದು ಹೈಕಮಾಂಡ್ ಚಿಂತನೆಗೆ ಜೈ ಅಂದಿದ್ದಾರೆ‌.

ಬಿಎಸ್​ವೈ ಆಪ್ತ ಮೂಲಗಳ ಅನಿಸಿಕೆ ಏನು:ಬಿ.ಎಲ್ ಸಂತೋಷ್ ಹೇಳಿಕೆ ಯಡಿಯೂರಪ್ಪ ಕುಟುಂಬವನ್ನು ಬಿಜೆಪಿಯಿಂದ ದೂರವಿಡಲು ನೀಡಿದ್ದಲ್ಲ ಎಂದು ಬಿಎಸ್​ವೈ ಆಪ್ತ ಮೂಲಗಳು ತಿಳಿಸಿವೆ. ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಗ್ರ ನಾಯಕ, ಅವರ ಪುತ್ರ ಬಿ.ವೈ ರಾಘವೇಂದ್ರ ಶಿವಮೊಗ್ಗ ಸಂಸದರಾಗಿದ್ದು, ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿ ಹೆಸರುಗಳಿಸಿದ್ದಾರೆ. ಅಲ್ಲದೆ ಬಂಗಾರಪ್ಪ ಅವರಂತಹ ಮಹಾನ್ ನಾಯಕರನ್ನೇ ಸೋಲಿಸಿ ರಾಜಕೀಯ ಮುನ್ನಲೆಗೆ ಬಂದಿದ್ದಾರೆ. ಮತ್ತೋರ್ವ ಪುತ್ರ ಬಿ.ವೈ ವಿಜಯೇಂದ್ರ ಪಕ್ಷದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಉಪ ಚುನಾವಣೆಗಳ ಉಸ್ತುವಾರಿಯಾಗಿ ಸಮರ್ಥವಾಗಿ ಕೆಲಸ ಮಾಡಿ ಈಗ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೇವಲ ಯಡಿಯೂರಪ್ಪ ಪುತ್ರರು ಎನ್ನುವ ಲೇಬಲ್ ನಲ್ಲಿ ಅವರಿಲ್ಲ, ಸ್ವತಂತ್ರವಾಗಿ ರಾಜಕೀಯದಲ್ಲಿ ತಮ್ಮದೇ ಆದ ಸಾಮರ್ಥ್ಯದ ಮೇಲೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಬಿ.ಎಲ್ ಸಂತೋಷ್ ಹೇಳಿಕೆ ಯಡಿಯೂರಪ್ಪ ಪುತ್ರರಿಗೆ ಅನ್ವಯವಾಗಲ್ಲ ಎಂದಿದ್ದಾರೆ.

ಇದೀಗ ರಾಜ್ಯಕ್ಕೆ ನಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸಿಎಂ ಬೊಮ್ಮಾಯಿ ನಿವಾಸದಲ್ಲಿ ಲಂಚ್ ಮೀಟ್ ನಡೆಸಲಿದ್ದಾರೆ. ಈ ವೇಳೆ ಉಭಯ ನಾಯಕರ ನಡುವೆ ಏನೆಲ್ಲಾ ಚರ್ಚೆ ನಡೆಯಲಿದೆ ಎನ್ನುವ ಕುತೂಹಲ ಮೂಡುವಂತೆ ಮಾಡಿದೆ. ನಾಯಕತ್ವ ಬದಲಾವಣೆ, ಸಂಪುಟ ಸರ್ಕಸ್ ಗೆ ತೆರೆ ಎಳೆಯುವ ಚರ್ಚೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಂಜೆ ಪಕ್ಷದ ಕಚೇರಿಗೂ ಅಮಿತ್ ಶಾ ಭೇಟಿ ನೀಡುತ್ತಿದ್ದು ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಭವಿಷ್ಯದ ಚುನಾವಣಾ ದೃಷ್ಟಿಯಿಂದ ಈ ಸಭೆ ಮಹತ್ವದ್ದಾಗಿದೆ. ಈ ಸಭೆಗೂ ಮುನ್ನ ಬಿ.ಎಲ್ ಸಂತೋಷ್ ಮಾಡಿರುವ ನಾಯಕತ್ವ ಬದಲಾವಣೆ, ಕುಟುಂಬ ರಾಜಕಾರಣಕ್ಕೆ ಬ್ರೇಕ್ ವಿಷಯ ಸಾಕಷ್ಟು ಸದ್ದು ಮಾಡುತ್ತಿದ್ದು, ಅಮಿತ್ ಶಾ ಭೇಟಿ ನಂತರ ಕೇಸರಿ ಪಾಳಯದಲ್ಲಿ ನಡೆಯಬಹುದಾದ ಬದಲಾವಣೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

For All Latest Updates

TAGGED:

ABOUT THE AUTHOR

...view details