ಬೆಂಗಳೂರು:ಶಿಕ್ಷಕರ ದಿನಾಚರಣೆ ಶುಭಾಶಯ ಕೋರಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಟ್ವೀಟ್ ಮೂಲಕ ಎಲ್ಲಾ ಶಿಕ್ಷಕರಿಗೆ ನಮನ ಸಲ್ಲಿಸಿದ್ದಾರೆ.
ಶಿಕ್ಷಕ ಪ್ರತಿಯೊಬ್ಬರ ಮಾರ್ಗದರ್ಶಕ. ನಮ್ಮ ನಿಮ್ಮೆಲ್ಲರ ಮೊದಲ ಪಾಠ ಶಾಲೆ ಹೆತ್ತ ತಾಯಿಯಾದರೆ, ಅಕ್ಷರ ಕಲಿಸಿ, ತಿದ್ದಿ ತೀಡಿ ವಿದ್ಯಾರ್ಜನೆ ಮಾಡಿಸಿದ್ದು ಶಿಕ್ಷಕ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಪ್ರತಿಯೊಬ್ಬರನ್ನು ರೂಪಿಸುವಲ್ಲಿ ಹೆತ್ತ ತಂದೆ-ತಾಯಿಯರಷ್ಟೇ ಸಮಾನ ಜವಾಬ್ದಾರಿ ಶಿಕ್ಷಕರದ್ದು ಎಂದು ಟ್ವೀಟ್ ಮಾಡಿ ಎಲ್ಲ ಶಿಕ್ಷಕರಿಗೆ ನಮನಗಳನ‌್ನು ತಿಳಿಸಿದ್ದಾರೆ.
ಡಿಸಿಎಂ ಡಾ. ಅಶ್ವತ್ಥನಾರಾಯಣ್ ಟ್ವೀಟ್ ಮೂಲಕ ಶಿಕ್ಷಕರ ದಿನದ ಶುಭ ಕೋರಿದ್ದಾರೆ. ಬದುಕಿನ ಆಧಾರ ಸ್ತಂಭ ಶಿಕ್ಷಣ. ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುವ ಈ ಶಿಕ್ಷಕರ ದಿನಾಚರಣೆಯಂದು ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿಯೊಬ್ಬರ ಜೀವನದ ಯಶಸ್ಸಿನ ಕೀಲಿ ಕೈ ಶಿಕ್ಷಣ ಆಗಿರುತ್ತದೆ. ಯಶಸ್ವಿ ಜೀವನ ನಡೆಸಲು ಪೂರಕವಾಗಿ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವ ಶಿಕ್ಷಕರ ಸಮೂಹಕ್ಕೆ ನನ್ನ ನಮನಗಳು ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಭಾರತದ ಮೊದಲ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ನನ್ನ ಕೋಟಿ ನಮನಗಳು ಎಂದು ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿದ್ದಾರೆ.