ಬೆಂಗಳೂರು :ವಿಧಾನಸಭಾ ಚುನಾವಣೆಯಲ್ಲಿ ಇಂಥವರಿಗೇ ಟಿಕೆಟ್ ನೀಡಬೇಕು ಎಂದು ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಶಿಫಾರಸು ಮಾಡಿದ ಹೆಸರುಗಳ ಪೈಕಿ ಕೆಲವರಿಗೆ ಕೊಕ್ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ಈ ಮಧ್ಯೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಸನ್ನಿ ಬಿಜೆಪಿಯಲ್ಲಿ ಶುರುವಾಗಿದ್ದು ಇಂದು ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಬಯಸುತ್ತಿದ್ದ ಈಶ್ವರಪ್ಪನವರು ಪಕ್ಷದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಪತ್ರ ಬರೆದು, ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಬಯಸುವುದಿಲ್ಲ. ನನ್ನ ಹೆಸರನ್ನು ಟಿಕೆಟ್‌ಗಾಗಿ ಪರಿಗಣಿಸಬಾರದು ಎಂದು ಕೋರಿಕೊಂಡಿದ್ದಾರೆ. ಹೀಗೆ ಚುನಾವಣಾ ಕಣದಿಂದ ಹಿಂದೆ ಸರಿಯುವ ಪರ್ವ ಬಿಜೆಪಿಯಲ್ಲಿ ಪ್ರಾರಂಭವಾಗಿದ್ದು, ಇದುವರೆಗೆ ಬಿಜೆಪಿ ಪಕ್ಷದ ನಾಲ್ಕು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ತಮ್ಮ ನಿವೃತ್ತಿ ತೀರ್ಮಾನವನ್ನು ಪ್ರಕಟಿಸಿದ್ದು, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡಾ ಸ್ಪರ್ಧೆಯ ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಅದೇ ರೀತಿ ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಕೂಡ ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಉನ್ನತ ಮೂಲಗಳ ಪ್ರಕಾರ, ಇನ್ನೂ ಹಲವು ನಾಯಕರು ಚುನಾವಣೆಯ ಕಣದಿಂದ ಹಿಂದೆ ಸರಿಯುವ ಲಕ್ಷಣಗಳಿದ್ದು, ಚುನಾವಣೆಯ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾದರೆ ಬಹುತೇಕರು ಇಂತಹ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಬಿಜೆಪಿಯ ರಾಜ್ಯ ಚುನಾವಣಾ ಸಮಿತಿ ಟಿಕೆಟ್‌ಗಾಗಿ ಶಿಫಾರಸು ಮಾಡಿರುವ ಹೆಸರುಗಳ ಪೈಕಿ 32 ಮಂದಿಗೆ ಟಿಕೆಟ್ ನೀಡಲು ವರಿಷ್ಠರು ನಕಾರ ವ್ಯಕ್ತಪಡಿಸಿದ್ದಾರೆ. ಸಿಡಿ ಹಗರಣದಲ್ಲಿ ಸಿಲುಕಿದವರು, ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದವರು, ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕಳೆದುಕೊಂಡವರು, 75 ವರ್ಷ ಮೀರಿದವರು ಈ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.