ಕರ್ನಾಟಕ

karnataka

By ETV Bharat Karnataka Team

Published : Aug 29, 2023, 7:52 PM IST

ETV Bharat / state

LPG price: ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರ ಇಳಿಕೆ.. ಬಿಜೆಪಿ ನಾಯಕರಿಂದ ಸ್ವಾಗತ

ಎಲ್‍ಪಿಜಿ ಸಿಲಿಂಡರ್ ದರವನ್ನು 200 ರೂಪಾಯಿ ಇಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

bjp-leaders-welcomed-reduction-in-cylinder-price
ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರ ಇಳಿಕೆ: ಬಿಜೆಪಿ ನಾಯಕರಿಂದ ಸ್ವಾಗತ

ಬೆಂಗಳೂರು: ಗೃಹಬಳಕೆಯ 14 ಕೆಜಿ ಎಲ್‍ಪಿಜಿ ಸಿಲಿಂಡರ್ ದರವನ್ನು 200 ರೂಪಾಯಿ ಇಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದಾರೆ. ಈ ನಿರ್ಧಾರದಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ ಎಂದಿರುವ ಅವರು, ಈ ಕುರಿತು ನಿರ್ಧರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಈಗಾಗಲೇ 200 ರೂ. ನೆರವು ಲಭಿಸುತ್ತಿದ್ದು, ಈಗ 400 ರೂ. ಬೆಲೆ ಇಳಿಕೆ ಆಗಲಿದೆ. ಅಲ್ಲದೆ ಹೊಸದಾಗಿ 75 ಲಕ್ಷ ಉಜ್ವಲ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡುವ ಕ್ರಮ ಸ್ವಾಗತಾರ್ಹ. ಹೊಗೆರಹಿತ ಅಡುಗೆ ಸಂಬಂಧ ಕೇಂದ್ರದ ಕ್ರಮ ಅತ್ಯಂತ ಸ್ವಾಗತಾರ್ಹ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಉಜ್ವಲ ಯೋಜನೆಯಡಿ, ಅಡುಗೆ ಅನಿಲದ ದರ ಕಡಿತಗೊಳಿಸಿ ಪ್ರತಿ ಸಿಲಿಂಡರ್​ಗೆ ಹೆಚ್ಚುವರಿ 200 ರೂ.ಗಳ ಸಬ್ಸಿಡಿ ಘೋಷಿಸಿರುವ ಕೇಂದ್ರ ಸಚಿವ ಸಂಪುಟದ ತೀರ್ಮಾನವನ್ನು ಸ್ವಾಗತಿಸುತ್ತೇನೆ. ದುರ್ಬಲ ಹಾಗೂ ಮಧ್ಯಮ ವರ್ಗದ ಜನರ ನೆರವಿಗಾಗಿ ನಿರಂತರ ಪ್ರಯತ್ನಶೀಲವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ, ರಕ್ಷಾ ಬಂಧನದ ಈ ಸಂದರ್ಭದಲ್ಲಿ ನಮ್ಮ ಎಲ್ಲ ತಾಯಂದಿರು ಹಾಗೂ ಸಹೋದರಿಯರಿಗೆ ನೆರವಾಗಲು ತೆಗೆದುಕೊಂಡಿರುವ ಈ ಕ್ರಮ ಅಭಿನಂದನಾರ್ಹ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉಜ್ಜಲ ಯೋಜನೆಯ ಸಿಲಿಂಡರ್ ಬೆಲೆಯನ್ನು 400 ರೂ.ಗಳಿಗೆ ಇಳಿಕೆ ಮಾಡಿ, ಎಲ್​​ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ.ಗಳಿಗೆ ಇಳಿಕೆ ಮಾಡುವ ಮೂಲಕ ಜನಸ್ನೇಹಿ ನಿರ್ಧಾರ ಕೈಗೊಂಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಅಭಿನಂದನೆಗಳು‌. ದೇಶದ ಜನರ ಆಶಯಕ್ಕೆ ತಕ್ಕಂತೆ ನಡೆಯುವ ಹೆಮ್ಮೆಯ ಕೇಂದ್ರ ಸರ್ಕಾರ ನಮ್ಮದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಎಕ್ಸ್ ಜಾಲತಾಣದಲ್ಲಿ ತಿಳಿಸಿದ್ದಾರೆ.

ಮತ್ತೊಂದೆಡೆ ನವದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಓಣಂ ಮತ್ತು ರಕ್ಷಾಬಂಧನ್ ಸಂದರ್ಭದಲ್ಲಿ ಲಕ್ಷಾಂತರ ಸಹೋದರಿಯರು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆದಾರರಿಗೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದಾರೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲು ಪ್ರಧಾನಿ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸಿಲಿಂಡರ್ ಬೆಲೆ:ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಪ್ರತಿ ಸಿಲಿಂಡರ್​ ಬೆಲೆ 1,105 ರೂ. ಇದೆ. ನಾಳೆಯಿಂದ ಹೊಸ ದರ ಅನ್ವಯವಾಗಲಿದೆ. ಅದೇ ರೀತಿಯಾಗಿ ಶಿವಮೊಗ್ಗದಲ್ಲಿ 1,116 ರೂ., ಹುಬ್ಬಳ್ಳಿಯಲ್ಲಿ 1,122 ರೂ., ಮೈಸೂರಿನಲ್ಲಿ 1,107 ರೂ., ದಾವಣಗೆರೆಯಲ್ಲಿ 1,120 ರೂ. ಹಾಗೂ ಬೆಳಗಾವಿಯಲ್ಲಿ 1,112 ರೂ. ಇದ್ದು, ಬುಧವಾರದಿಂದ ಹೊಸ ಬೆಲೆ ಜಾರಿಗೆ ಬರಲಿದೆ.

ಇದನ್ನೂ ಓದಿ:ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ.. ಗ್ಯಾರಂಟಿ ಯೋಜನೆಗೆ ಮನೆ ಮುಂದೆ ರಂಗೋಲಿ ಹಾಕಿ ಮಹಿಳೆಯರು ಫುಲ್​ ಖುಷ್​

ABOUT THE AUTHOR

...view details