ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ ಸಂಕಷ್ಟದ ನಡುವೆಯೂ ತೆರಿಗೆ ಹೆಚ್ಚಳ ಇಲ್ಲದ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಮಹಿಳಾ ದಿನಾಚರಣೆಯಂದು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಮಹಿಳೆಯರಿಗಾಗಿ ವಿಶೇಷ ಅನುದಾನ ನೀಡಿದ್ದಾರೆ. ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಪೂರಕ ಆಯವ್ಯಯ ಮಂಡಿಸಿದ್ದಾರೆ. ಈ ಆಯವ್ಯಯ ಪತ್ರವು ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕಟೀಲ್ ಮಾಧ್ಯಮ ಹೇಳಿಕೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದಾನಂದಗೌಡ ಹೃತ್ಪೂರ್ವಕ ಅಭಿನಂದನೆ:
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಶಯದೊಂದಿಗೆ ಸಮತೋಲಿತ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.
ಶಿಕ್ಷಣ, ಆರೋಗ್ಯ, ರಸ್ತೆ, ನೀರಾವರಿ, ಕೈಗಾರಿಕೆ ಮತ್ತಿತರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ₹44,237 ಕೋಟಿ ಬಂಡವಾಳ ವೆಚ್ಚ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀರಾಮುಲು ಸ್ವಾಗತ:
ಕೃಷಿ, ಆರೋಗ್ಯ, ಮೂಲ ಸೌಕರ್ಯ, ಮಹಿಳೆಯರು, ಕಿರು ಉದ್ಯಮ ಸೇರಿ ಸರ್ವ ಕ್ಷೇತ್ರಗಳ ಏಳ್ಗೆಯ ದಿಸೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂಗಡಪತ್ರ ಮಂಡಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದ ಹೊರಬರಲು ಸಹ ಇದು ಸಹಕಾರಿಯಾಗಿದ್ದು, ರಾಜ್ಯ ಮತ್ತಷ್ಟು ಪ್ರಗತಿ ಕಾಣಲಿದೆ ಎಂದು ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.