ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ ಅವ್ಯವಹಾರ ಆಗಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಈ ವರ್ಷದ ಅತ್ಯಂತ ದೊಡ್ಡ ಕಾಮಿಡಿ. ಯತ್ನಾಳರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಅವರ ವಿರುದ್ಧ ಯತ್ನಾಳ್ ಮಾತನಾಡಿದ್ದಾರೆ. ಯತ್ನಾಳ್ ಪ್ರಭಾವಿ ಸಚಿವರ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ, ಇದು ಯಾರಿಗೂ ಗೊತ್ತಿಲ್ಲವೇ?, ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ಅದಿವೇಶನದಲ್ಲಿ ಸುದೀರ್ಘ ಚರ್ಚೆಯಾಗಿತ್ತು. 2,000 ಕೋಟಿ ರೂ ಮಾತ್ರ ಬಿಡುಗಡೆಯಾಗಿತ್ತು. ಆದರೆ 40 ಸಾವಿರ ಕೋಟಿ ಅಂತ ಆರೋಪ ಮಾಡುತ್ತಿದ್ದಾರೆ. ಅದರ ಬಗ್ಗೆ ದಾಖಲೆ ಇದ್ದರೆ ಕೊಡಲಿ ಎಂದರು.
ಯತ್ನಾಳ್ ಹೇಳಿಕೆಯಿಂದ ನೋವಾಗಿದೆ:ಯತ್ನಾಳ್ ಬಗ್ಗೆ ನಾನು ಇಲ್ಲಿ ಮಾತನಾಡಲ್ಲ. ನನಗೆ ಮನಸ್ಸಿಗೆ ನೋವಾಗಿದೆ. ಪಕ್ಷದಲ್ಲೇ ಇದ್ದು ಈ ರೀತಿ ಹೇಳೋದು ಸರಿಯಲ್ಲ. ನಾವೆಲ್ಲ ಪಕ್ಷ ಕಟ್ಟಲು ಶ್ರಮಿಸಿದ್ದೇವೆ. ನಾನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ: ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆಯನ್ನು ನಾನೂ ಕೂಡಾ ಒಪ್ಪಲ್ಲ. ಈ ವಿಚಾರವಾಗಿ ಹೈಕಮಾಂಡ್ ಬಳಿ ಮಾತಾಡಬಹುದಿತ್ತು. ಅದರ ಬದಲು ಅವರು ಬೀದಿಯಲ್ಲಿ ಮಾತಾಡಿರೋದು ಸರಿಯಲ್ಲ. ಅವರ ಮನಸ್ಸಿಲ್ಲಿ ಏನಿದೆ ಅಂತ ಗೊತ್ತಿಲ್ಲ. ಕೇಂದ್ರದ ಬಿಜೆಪಿ ನಾಯಕರು ನೋಡಿಕೊಳ್ಳುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.