ಬೆಂಗಳೂರು: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಬಿಜೆಪಿ ಹುಮ್ಮಸ್ಸಿನಲ್ಲಿದೆ. ಕರ್ನಾಟಕದಲ್ಲಿಯೂ ಗುಜರಾತ್ ಮಾದರಿ ತಂತ್ರಗಾರಿಕೆ ಅನುಸರಿಸುವ ಮೂಲಕ ರಾಜ್ಯದ ಮುಂದಿನ ವಿಧಾನಸಭೆಗೆ ಬಿಜೆಪಿ ಚುನಾವಣೆಗೆ ಇಳಿಯಲಿದ್ದು, 20ಕ್ಕೂ ಹೆಚ್ಚು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವರಿರುವ ಕೆಲವರು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ದೆಹಲಿ ಬಿಜೆಪಿ ವರಿಷ್ಠರು ಯೋಚಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಕರ್ನಾಟಕದಲ್ಲಿ ಆರು ನೂರಕ್ಕೂ ಹೆಚ್ಚು ಮಂದಿ ಮೋದಿ-ಅಮಿತ್ ಶಾ ಅವರ ಸೂಚನೆಯಂತೆ ಪ್ರತ್ಯೇಕ ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ರವಾನಿಸುವ ವರದಿ ಪ್ರಕಾರ ಬಿಜೆಪಿಯ ಹಾಲಿ ಶಾಸಕರ ಪೈಕಿ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಮತ್ತೆ ಗೆಲ್ಲುವ ಶಕ್ತಿ ಇಲ್ಲ. ಅಂಥವರಿಗೆ ಯಾವ ಕಡೆಯಿಂದ ಶಕ್ತಿ ನೀಡಿದರೂ ಅವರ ಎದುರಾಳಿಗಳನ್ನು ಗೆಲ್ಲುವುದು ಸಾಧ್ಯವಿಲ್ಲ. ಹೀಗಾಗಿ ಅಂತ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವುದು ಉತ್ತಮ ಎಂದು ಈ ಸರ್ವೇ ಕೈಗೊಂಡಿರುವ ತಂಡಗಳು ವರದಿ ರವಾನಿಸಿವೆ.
ಮುಂದಿನ ಚುನಾವಣೆಯಲ್ಲಿ ಗೆಲ್ಲುವವರು ಯಾರು? ಸ್ವಲ್ಪ ಪುಷ್ಟಿ ತುಂಬಿದರೂ ಗೆಲ್ಲುವವರು ಮತ್ತು ಯಾವ ಕಾರಣಕ್ಕೂ ಗೆಲ್ಲದೇ ಇರುವವರು ಯಾರು ಎಂಬ ಮೂರು ವಿಭಾಗಗಳನ್ನು ಈ ಸರ್ವೇ ತಂಡಗಳು ಗುರುತಿಸಿವೆ. ಸೋಲು ಅನುಭವಿಸುವವರು ಯಾರು? ಎಂಬ ವಿವರವನ್ನು ವರಿಷ್ಠರಿಗೆ ಸಮೀಕ್ಷಾ ತಂಡಗಳು ನೀಡಿವೆ.
ಬಸವರಾಜ ಬೊಮ್ಮಾಯಿ ಸಂಪುಟದ ಒಬ್ಬ ಸಚಿವರಂತೂ ತಮ್ಮ ಕ್ಷೇತ್ರದಲ್ಲಿ ಪಂಚಾಯಿತಿಗೊಬ್ಬರಂತೆ ಆಪ್ತ ಸಹಾಯಕರನ್ನಿಟ್ಟುಕೊಂಡಿದ್ದರೂ ಈ ಆಪ್ತ ಸಹಾಯಕರ ನಡವಳಿಕೆ ಈ ಸಚಿವರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಜನರಲ್ಲಿ ಅವರ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ. ಹೀಗಾಗಿ ಹಾಲಿ ಶಾಸಕರ ಪೈಕಿ ಯಾರು ಯಾರು ತಮ್ಮ ನೆಲೆ ಕಳೆದುಕೊಂಡಿರುವವರ ಬಗ್ಗೆ ವಿವರಿಸಿರುವ ಸರ್ವೇ ತಂಡಗಳು, ಇಂಥವರಿಗೆ ಟಿಕೆಟ್ ತಪ್ಪಿಸದಿದ್ದರೆ ಪಕ್ಷ ಗೆಲುವಿನ ಆಸೆ ಹೊಂದುವಂತಿಲ್ಲ ಎಂದು ಎಂದು ಖಚಿತ ಪಡಿಸಿವೆ.