ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುವ ದಿನಗಳು ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕಿಯ ಚಟುವಟಿಕೆಗಳು ಮತ್ತೆ ಗರಿಗೆದರತೊಡಗಿವೆ. ಒಂದೆಡೆ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸಿದರೆ, ಮತ್ತೊಂದೆಡೆ ಹಲವು ಹಿರಿಯ ಮುಖಂಡರು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಹೇಗಾದರೂ ಮಾಡಿ ಹೈಕಮಾಂಡ್ ಕೃಪೆಗಳಿಸಿ ಮುಖ್ಯಮಂತ್ರಿಯಾಗಲು ತೆರೆಮರೆಯಲ್ಲಿ ತೀವ್ರ ತರದ ಕಸರತ್ತು ನಡೆಸುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಹಲವಾರು ರಾಜಕೀಯ ಲೆಕ್ಕಾಚಾರಗಳೊಂದಿಗೆ ಸಿಎಂ ಹುದ್ದೆಯ ಮೇಲೆಯೇ ತಮ್ಮ ಗಮನ ಕೇಂದ್ರೀಕರಿಸಿ ರಾಜಕೀಯ ಚದುರಂಗದಾಟದಲ್ಲಿ ಆಕಾಂಕ್ಷಿಗಳು ತೊಡಗಿದ್ದಾರೆ. ಹಿರಿಯ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎರಡು ವರ್ಷದ ಆಡಳಿತ ಪೂರೈಸುತ್ತಿದ್ದಂತೆಯೇ ಅವರನ್ನು ಬದಲಾಯಿಸಿದಂತೆ ಪಕ್ಷದ ಹೈಕಮಾಂಡ್ ಇದೇ ಜುಲೈ 28ಕ್ಕೆ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಬಸವರಾಜ ಬೊಮ್ಮಾಯಿ ಅವರನ್ನೂ ಬದಲಿಸುವ ಸಾದ್ಯತೆಗಳಿವೆ ಎನ್ನುವ ಲೆಕ್ಕಾಚಾರ ಇದೆ. ಈ ಹಿನ್ನೆಲೆಯಲ್ಲೇ ಖಾಲಿ ಇರದ ಸಿಎಂ ಕುರ್ಚಿಗಾಗಿ ಹಲವಾರು ಮುಖಂಡರು ತಮ್ಮದೇ ಆದ ರೀತಿಯಲ್ಲಿ ಲಾಬಿ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಅವರ ಗುಂಪಿನ ಜೊತೆಗೂಡಿ ಮೈತ್ರಿ ಸರ್ಕಾರ ರಚಿಸಿದ ಅನಿರೀಕ್ಷಿತ ರಾಜಕೀಯ ವಿದ್ಯಮಾನದಂತೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ನಾಯಕತ್ವವನ್ನು ಹೈಕಮಾಂಡ್ ಬದಲಿಸಬಹುದೆನ್ನುವ ನಿರೀಕ್ಷೆಯನ್ನು ಆಡಳಿತ ಪಕ್ಷದ ಕೆಲವು ಶಾಸಕರು, ಸಚಿವರು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಸಮೀಕ್ಷೆಗಳ ಮುನ್ಸೂಚನೆ :ಮುಖ್ಯಮಂತ್ರಿ ಬೊಮ್ಮಾಯಿ ನಾಯಕತ್ವದಲ್ಲಿ ಬರಲಿರುವ ವಿಧಾನಸಭೆ ಚುನಾವಣೆ ಎದುರಿಸಿದರೆ ಬಿಜೆಪಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕಡಿಮೆ ಎನ್ನುವ ಬಗ್ಗೆ ಪಕ್ಷದ ಆಂತರಿಕ ಸಮೀಕ್ಷೆಗಳೇ ಮುನ್ಸೂಚನೆ ನೀಡಿವೆ. ಇದೇ ಕಾರಣವನ್ನು ಮುಂದಿಟ್ಟು ಮುಖ್ಯಮಂತ್ರಿಗಳ ಬದಲಾವಣೆಗೆ ಹಲವರು ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ಪಕ್ಷದ ಹೈಕಮಾಂಡ್ ಸಹ ಪೂರಕವಾಗಿಲ್ಲದ ಸಮೀಕ್ಷೆಗಳ ವರದಿಯಿಂದ ಆತಂಕಕ್ಕೀಡಾಗಿದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.
ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ನಿರ್ಧಾರಕ್ಕೆ ಹೈಕಮಾಂಡ್ ಬಂದರೆ ತಮ್ಮನ್ನು ಪರಿಗಣಿಸುವಂತೆ ಬಿಜೆಪಿಯ ಹಲವಾರು ಕೆಂದ್ರದ ನಾಯಕರು ಮತ್ತು ರಾಜ್ಯದ ಹಿರಿಯ ಮುಖಂಡರು ತಮ್ಮದೇ ಆದ ನೆಟ್ವರ್ಕ್ ಮೂಲಕ ಹೈಕಮಾಂಡ್ ಕೃಪಾಕಟಾಕ್ಷಕ್ಕೆ ಒಳಗಾಗಿ ಸಿಎಂ ಆಗುವ ಕನಸು ನನಸು ಮಾಡಿಕೊಳ್ಳಲು ಭಗೀರಥ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದೂ ಹೇಳಲಾಗುತ್ತಿದೆ.
ಸಿಎಂ ಕುರ್ಚಿಯ ಆಕಾಂಕ್ಷಿಗಳು:ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿತರಿಗಿಂತ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಕನಸು ಕಾಣುತ್ತಿರುವವರ ಸಂಖ್ಯೆ ಹೆಚ್ಚಿದೆ. ಸುಮಾರು 15ಕ್ಕೂ ಹೆಚ್ಚಿನ ಸಂಖ್ಯೆಯ ಮುಖಂಡರುಗಳು ಸಿಎಂ ಆಗುವ ಗುರಿಹೊಂದಿದ್ದು ಆ ನಿಟ್ಟಿನ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.