ಬೆಂಗಳೂರು: "ಲಿಂಗಾಯತ ಸಮುದಾಯವೇ ಈ ಸಲ ಬಿಜೆಪಿಯನ್ನು ಸೋಲಿಸುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಭವಿಷ್ಯದಲ್ಲಿ ನಡೆಯುವ ವಿಚಾರ ಭಗವಂತನಿಗಿಂತ ಮೊದಲೇ ಗೊತ್ತಿರುತ್ತದೆ" ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವ್ಯಂಗ್ಯವಾಡಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿ, "ಯಾರನ್ನಾದರೂ ಮುಖ್ಯಮಂತ್ರಿ ಮಾಡುವುದು ಹೇಗೆ ಕುತಂತ್ರ ಆಗುತ್ತದೆ? ಇದೇ ಕುಮಾರಸ್ವಾಮಿ ಮೂರು ತಿಂಗಳ ಹಿಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಸಿಎಂ ಮಾಡುತ್ತೇವೆ ಅಂದರು. ನಂತರ ಒಂದು ತಿಂಗಳಲ್ಲೇ ದಲಿತರನ್ನು ಸಿಎಂ ಮಾಡುತ್ತೇವೆ ಎಂದರು. ಈಗ ನಾನೇ ಮುಖ್ಯಮಂತ್ರಿ ಆಗಲೇಬೇಕು ಅಂತ ಹೊರಟಿದ್ದಾರೆ. ಮುಸ್ಲಿಮರನ್ನು, ದಲಿತರನ್ನು ಸಿಎಂ ಮಾಡೋದು ರಾಜಕೀಯ ತಂತ್ರ. ಆದರೆ, ಬ್ರಾಹ್ಮಣರನ್ನು ಸಿಎಂ ಮಾಡೋದು ಹುನ್ನಾರ ಆಗುತ್ತಾ" ಎಂದು ಪ್ರಶ್ನಿಸಿದರು.
"ಕುಮಾರಸ್ವಾಮಿ ಅವರದ್ದು ಬ್ಲಾಕ್‌ಮೇಲ್ ಟೆಕ್ನಿಕ್. ಅವರಿಗೆ ಸಿದ್ಧಾಂತ, ತತ್ವ ಯಾವುದೂ ಇಲ್ಲ. ಹೀಗಾಗಿ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲು ಯಾರಾದರೂ ಸರಿ ಅಂತಾರೆ. ಬಿಜೆಪಿ ಜತೆಗೂ ಕಾಂಗ್ರೆಸ್ ಜತೆಗೂ ಸೇರಿ ಅಧಿಕಾರ ಹಿಡಿಯುತ್ತಾರೆ. ಕಾಂಗ್ರೆಸ್ ಬಿಜೆಪಿಗಳನ್ನು ಅವರು ಸಮನಾದ ಅಂತರದಲ್ಲಿ ಇಟ್ಟಿದ್ದಾರೆ. ಯಾರ ಜತೆಗೂ ಬೇಕಾದರೂ ಸೇರಿ ಅಧಿಕಾರ ಹಿಡಿಯಬಹುದು ಅಂತ ಹೊಂಚು ಹಾಕಿದ್ದಾರೆ. ಕುಮಾರಸ್ವಾಮಿ ಅವರೂ ಗಾಜಿನ ಮನೆಯಲ್ಲಿದ್ದಾರೆ ಅನ್ನೋದನ್ನು ಮರೆಯಬಾರದು" ಎಂದು ಟೀಕಿಸಿದರು.
"ಬಿ.ಬಿ.ಹೊಸಗೌಡ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ಬಿ.ಬಿ.ಹೊಸಗೌಡ ಕೂಡ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ, ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಶೇ.40 ರಷ್ಟು ಕಮಿಷನ್ ಪಡೆಯುತ್ತಾ ಇದ್ದರು ಎಂದು ಆರೋಪ ಮಾಡಿದ್ದಾರೆ. ತಾವು ಪಡೆದ 40 ಪರ್ಸೆಂಟ್ ಲಂಚದ ಆರೋಪವನ್ನು ಬಿಜೆಪಿ ಮೇಲೆ ಹೊರಿಸಿದ್ದಾರೆ. ಈಗ 40% ಆರೋಪ ಬಂದಿರುವುದು ಸಿದ್ದರಾಮಯ್ಯ ಮೇಲೆ. ಈಗ ಅವರು ಉತ್ತರ ಕೊಡಬೇಕು" ಎಂದರು.
"ಫೆಬ್ರವರಿ ತಿಂಗಳಲ್ಲಿ ರಾಜ್ಯದ ತುಂಬಾ 4 ಕಡೆ ರಥಯಾತ್ರೆಗೆ ವರಿಷ್ಠರು ಸೂಚಿಸಿದ್ದಾರೆ. ಅದರ ವಿಚಾರವಾಗಿ ಕಳೆದ ಎರಡು ದಿನದಿಂದ ಸಭೆ ಮಾಡಿದ್ದೇವೆ. ಯಾತ್ರೆ ಯಾವ ಕ್ಷೇತ್ರದಲ್ಲಿ ಸಂಚರಿಸಬೇಕು ಅಂತ ಸಭೆಯಾಗಿದೆ. ಚರ್ಚೆ ವಿಚಾರ ವರಿಷ್ಠರಿಗೆ ಕಳಿಸಿ, ಅವರು ಒಪ್ಪಿಗೆ ಬಳಿಕ ಅಂತಿಮ ಮಾಡುತ್ತೇವೆ. ಯಾರೆಲ್ಲಾ ರಥಯಾತ್ರೆಯಲ್ಲಿ ಇರುತ್ತಾರೆ, ಯಾರ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ ಎನ್ನುವುದು ಮುಂದೆ ನಿರ್ಧಾರವಾಗಲಿದೆ. ರಾಜ್ಯ ಹಾಗೂ ಕೇಂದ್ರ ನಾಯಕರ ಲಭ್ಯತೆ ನೋಡಿಕೊಂಡು ಕಾರ್ಯಕ್ರಮ ಜೋಡಿಸಲಾಗುತ್ತದೆ. ಕೇಂದ್ರದಿಂದ ಯಾರ್ಯಾರು ಬೇಕು ಅಂತ ಪಟ್ಟಿ ಕಳಿಸಿದ್ದೇವೆ" ಎಂದು ರಥಯಾತ್ರೆಯ ಸಂಚಾಲಕರೂ ಆದ ಸಚಿವ ಸಿ.ಸಿ.ಪಾಟೀಲ್ ಇದೇ ವೇಳೆ ಮಾಹಿತಿ ನೀಡಿದ್ದಾರೆ.
"ಸಂಚಾಲಕರಾಗಿ ನಾನು, ಸಹ ಸಂಚಾಲಕರಾಗಿ ರವಿಕುಮಾರ್ ಕೆಲಸ ಮಾಡುತ್ತಿದ್ದೇವೆ. ಬಜೆಟ್ ಅಧಿವೇಶನದ ಬಳಿಕ ಈ ತಿಂಗಳಿಂದಲೇ ರಥಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ನಾಯಕರನ್ನು ಬಿಜೆಪಿ ಕರೆತರುತ್ತಿರುವುದಕ್ಕೆ ಕಾಂಗ್ರೆಸ್ ಟೀಕಿಸಿದೆ. ಆದರೆ, ರಾಷ್ಟ್ರೀಯ ನಾಯಕರನ್ನು ಕರೆಸೋದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಅದು ಅವರಿಗೂ ಗೊತ್ತಿದೆ. ಅವರ ತಲೆಯಲ್ಲಿ ಏನೂ ಇಲ್ಲ ಅನ್ನೋದು ಇದರಿಂದ ಗೊತ್ತಾಗುತ್ತದೆ" ಎಂದು ಟೀಕಿಸಿದರು.
ಇದನ್ನೂ ಓದಿ:ಕುಮಾರಸ್ವಾಮಿ ಅವರದ್ದು ಕುಟುಂಬದ ಪಕ್ಷ: ಬಿಜೆಪಿಯಲ್ಲಿ ಯಾರಾದ್ರೂ ಸಿಎಂ - ಪಿಎಂ ಆಗಬಹುದು; ಆರ್ ಅಶೋಕ್