ಕರ್ನಾಟಕ

karnataka

ಜನರ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತದೆ ಅನ್ನೋದು ಸುಳ್ಳಾಗಿದೆ: ಸಿ.ಟಿ ರವಿ

By

Published : Mar 8, 2021, 7:35 PM IST

ಇಂದು ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ 2021-22ನೇ ಸಾಲಿನ ರಾಜ್ಯ ಬಜೆಟ್​​ ಕುರಿತು ರಾಜ್ಯ ನಾಯಕರು ತಮ್ಮ ಇಲಾಖೆ ಯೋಜನೆಗಳ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಬಜೆಟ್​​ನಲ್ಲಿನ ಹೊಸ ಯೋಜನೆಗಳು ಹಾಗೂ ಅನುದಾನದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

bjp-leaders-reacted-about-state-budget
ಸುರೇಶ್ ಕುಮಾರ್​ ಸಿ.ಟಿ ರವಿ ಸೋಮಶೇಖರ್

ಬೆಂಗಳೂರು/ಚಾಮರಾಜನಗರ/ಮೈಸೂರು: ಬಿಜೆಪಿ ಸರ್ಕಾರ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತದೆ ಎಂಬುದು ಸುಳ್ಳಾಗಿದೆ. ಇದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಪೂರಕ ಬಜೆಟ್ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಸರ್ವಸ್ಪರ್ಶಿಯಾಗಿದ್ದು, ಕರಭಾರವಿಲ್ಲದ ಜನಪರ ಬಜೆಟ್ ಆಗಿದೆ.

ಮಹಿಳೆಯರ ಅಭ್ಯುದಯ, ಕೃಷಿ, ತೋಟಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಒತ್ತು ನೀಡಿರುವುದು ಶ್ಲಾಘನೀಯ. ಮಹಿಳಾ ದಿನಾಚರಣೆಯ ದಿವಸವೇ ಮಂಡಿಸಿದ ಬಜೆಟ್​​ನಲ್ಲಿ ಮಹಿಳಾ ಸ್ವಾವಲಂಬನೆಗೆ ಆದ್ಯತೆ ನೀಡಲಾಗಿದೆ. ಮಹಿಳಾ ಉದ್ಯಮಿಗಳಿಗೆ ಶೇ. 4 ರ ಬಡ್ಡಿದರದಲ್ಲಿ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ ನೀಡಲು ನಿರ್ಧರಿಸಿರುವುದರಿಂದ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದರುವ ಸಚಿವ ಎಸ್. ಸುರೇಶ್ ಕುಮಾರ್, ಅಭಿವೃದ್ಧಿ ಪಥದಲ್ಲಿರುವ ಗಡಿ ಜಿಲ್ಲೆ ಚಾಮರಾಜನಗರದ ಅಭಿವೃದ್ಧಿಗೆ 2021-22ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಿಎಸ್​​​ವೈ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೊರೊನಾ ವಿಷಮ ಕಾಲಘಟ್ಟದ ಮಧ್ಯೆಯೂ ಗಡಿ ಜಿಲ್ಲೆಯ ಅಭಿವೃದ್ಧಿಗೆ ಆಯವ್ಯಯದಲ್ಲಿ ಪ್ರಾತಿನಿಧ್ಯ ನೀಡಿದ್ದು, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ಸೇರ್ಪಡೆಗೊಳಿಸಿದ್ದಾರೆ ಎಂದಿದ್ದಾರೆ.

ಗಡಿ ಜಿಲ್ಲೆಯಲ್ಲಿ ಅರಿಶಿಣ ಬೆಳೆಗಾರರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅರಿಶಿಣ ಮಾರುಕಟ್ಟೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರದೇಶದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ವನ್ಯಜೀವಿ ಸಫಾರಿಯನ್ನೊಳಗೊಂಡಂತೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ಆನೆ ಕಾರಿಡಾರಿನ ಭಾಗವಾಗಿರುವ ಚಾಮರಾಜನಗರ ಜಿಲ್ಲೆಯ ಬೂದಿಪಡಗದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಆನೆ ಶಿಬಿರ ಪ್ರಾರಂಭಿಸಲಾಗುವುದು ಎಂದಿದ್ದಾರೆ.

ಇತ್ತ ಮೈಸೂರಲ್ಲಿ ಬಜೆಟ್​ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಸ್​​.ಟಿ ಸೋಮಶೇಖರ್​, ಜನಪರ ಹಾಗೂ ರೈತಪರ ಬಜೆಟ್ ಆಗಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೊರೊನಾ ಸಂಕಷ್ಟ ಕಾಲದಲ್ಲೂ ಆರ್ಥಿಕವಾಗಿ ಚೇತರಿಕೆಗೆ ಎಲ್ಲಾ ವಲಯಕ್ಕೂ ಆದ್ಯತೆ ನೀಡಿದ್ದಾರೆ ಎಂದರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS) ಟಿಎಸಿಎಸಿಎಂಎಸ್​​​ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಸಂಗ್ರಹಣಾ ಶುಲ್ಕದ ಶೇ.25 ಸಹಾಯಧನ ವಿತರಣೆಗೆ 25 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಪ್ರಯೋಜನಗಳಿವೆ ಎಂದಿದ್ದಾರೆ.

ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಹಾಗೂ ಟಿಎಸಿಎಸಿಎಂಎಸ್ ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಶೇ.11ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವಧಿಗೆ ಸರ್ಕಾರದಿಂದ ಶೇ. 4ರ ಬಡ್ಡಿ ಸಹಾಯಧನ ನೀಡುವ ಸಂಬಂಧ 5 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ. ಇದೂ ಸಹ ರೈತರಿಗೆ ವರದಾನವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಆಯವ್ಯಯ ಮಂಡನೆ ಬಳಿಕ ಸಿಎಂ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

ABOUT THE AUTHOR

...view details