ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸಬರಿಗೆ ಮಣೆಹಾಕಿ ನಡೆಸಿದ್ದ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲಿಯೂ ನಡೆಸಲು ಬಿಜೆಪಿ ಹೈಕಮಾಂಡ್ ಚಿಂತನೆಯಲ್ಲಿದೆ. 13 ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲು ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆಯಲ್ಲಿದೆ. ಅಲಿಖಿತ ನಿಯಮದ ಅನ್ವಯ 75 ವರ್ಷ ದಾಟಿದ ನಾಯಕರಿಗೆ ಚುನಾವಣಾ ರಾಜಕೀಯದಿಂದ ಹೊರಗಿಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಡಿವಿ ಸದಾನಂದಗೌಡ (70), ಬಿಎನ್ ಬಚ್ಚೇಗೌಡ (81), ಶ್ರೀನಿವಾಸ ಪ್ರಸಾದ್ (76) ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಶಿವಕುಮಾರ್ ಉದಾಸಿ(56) ವೈಯಕ್ತಿಕ ಕಾರಣದಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ಸಂಸದರ ವಯಸ್ಸು 70 ದಾಟಿದ್ದು ಅವರಿಗೆ ಟಿಕೆಟ್ ನೀಡದಿರುವ ಚಿಂತನೆ ನಡೆದಿದೆ ಎಂಬ ಮಾತುಗಳು ಪಕ್ಷದ ವಲಯದಿಂದ ಕೇಳಿ ಬಂದಿದೆ. ಇದರ ಜೊತೆಗೆ ಅನಾರೋಗ್ಯ, ಸ್ಪರ್ಧೆಯಿಂದ ಹಿಂದೇಟು, ಸೂಕ್ತವಲ್ಲ ಎನ್ನುವ ಕಾರಣಕ್ಕಾಗಿ ಮೂವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತು ಕೂಡ ಇದೆ. ಒಟ್ಟು 13 ಕ್ಷೇತ್ರಗಳಲ್ಲಿ ಬದಲಾವಣೆ ತರಲಾಗುತ್ತದೆ ಎಂಬ ಮಾತುಗಳಿವೆ. ಇದು ಟಿಕೆಟ್ ಹಂಚಿಕೆಯಾದಾಗಲೇ ಗೊತ್ತಾಗಬೇಕಿದೆ. ಆದರೆ ಹೀಗೊಂದು ಚರ್ಚೆ ಪಕ್ಷದ ಆಂತರಿಕ ವಲಯದಿಂದ ಕೇಳಿ ಬರುತ್ತಿದೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸಿಟಿ ರವಿ ಅವರಿಗೆ ಟಿಕೆಟ್ ನೀಡಿ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವಿದೆ. ವರ್ಷದಿಂದಲೇ ಈ ಮಾತು ಕೇಳಿ ಬರುತ್ತಿದೆ. ಇದೀಗ ಸದಾನಂದಗೌಡರು ಕಣದಲ್ಲಿ ಇಲ್ಲದ ಕಾರಣ ಶೋಭಾ ಕರಂದ್ಲಾಜೆ ಹೆಸರಿಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಇನ್ನು ಒಂದು ವೇಳೆ ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದಲ್ಲಿ ಹಾಲಿ ಸಂಸದೆ ಸುಮಲತಾ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡುವ ಪ್ರಸ್ತಾಪವೂ ಇದೆ. ಒಂದು ವೇಳೆ ಇಲ್ಲಿ ಹೊಸ ಮುಖಕ್ಕೆ ಮಣೆಹಾಕಬೇಕು ಎಂದರೆ ತುಳಸಿಮುನಿರಾಜು ಅಥವಾ ಮಹಿಳಾ ಅಭ್ಯರ್ಥಿ ಬೇಕು ಎಂದರೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹೆಸರು ಚಾಲ್ತಿಯಲ್ಲಿದೆ.
ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶ್ರೀನಿವಾಸ್ ಪ್ರಸಾದ್:ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ವಿ.ಶ್ರೀನಿವಾಸ್ ಪ್ರಸಾದ್ಗೆ ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತ. ಯಾಕೆಂದರೆ ಅವರು ಈಗಾಗಲೇ ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದಾರೆ. ಚಿತ್ರನಟ ಆರ್.ಅರ್ಜುನ್ ರಮೇಶ್ ಆಕಾಂಕ್ಷಿಯಾಗಿದ್ದಾರೆ. ತಿ.ನರಸೀಪುರ ಪುರಸಭಾ ಸದಸ್ಯರಾಗಿರುವ ಅವರು ಕಿರುತೆರೆ - ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದು ಲೋಕಸಭಾ ಕಣಕ್ಕಿಳಿಯುವ ಉತ್ಸುಕತೆ ತೋರಿದ್ದಾರೆ. ಹರ್ಷವರ್ಧನ್ ಕೂಡ ಟಿಕೆಟ್ ಗಾಗಿ ಎದುರುನೋಡುತ್ತಿದ್ದಾರೆ. ಆದರೆ, ಶ್ರೀನಿವಾಸ ಪ್ರಸಾದ್ ಒಪ್ಪಿಗೆ ಇಲ್ಲಿ ಮಹತ್ವದ್ದಾಗಿರಲಿದೆ. ಆದರೂ, ಈ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಕ್ಕೆ ಟಿಕೆಟ್ ಸಾಧ್ಯತೆ ಇದೆ.
ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿದ ಆಕಾಂಕ್ಷಿತರ ಸಂಖ್ಯೆ;ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವ ಡಾ.ಸುಧಾಕರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಪಡೆಯುವ ಕೂಡ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಯಲ್ಲಿಯೇ ಯಡಿಯೂರಪ್ಪ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ನನ್ನು ರಾಜಕೀಯಕ್ಕೆ ತರಲು ಮುಂದಾಗಿದ್ದು ಟಿಕೆಟ್ ಲಾಬಿ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹೆಸರೂ ಚಾಲ್ತಿಯಲ್ಲಿದೆ.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಬಾಬುರಾಜೇಂದ್ರ ನಾಯಕ್ ಟಿಕೆಟ್ ಅಪೇಕ್ಷೆ ವ್ಯಕ್ತಪಡಿಸಿ ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ್ ನಾಯಕ್, ಉಮೇಶ್ ಕಾರಜೋಳ, ಮಂಜುನಾಥ್ ಮೀಸಿ ಹೆಸರು ಚಾಲ್ತಿಯಲ್ಲಿವೆ.
ಲೋಕಸಭೆಗೆ ಸ್ಪರ್ಧಿಸಲು ಸೋಮಣ್ಣ ಪ್ರಯತ್ನ:ಕೋಲಾರ ಕ್ಷೇತ್ರದಿಂದ ಹಾಲಿ ಸಂಸದ ಮುನಿಸ್ವಾಮಿ ಜೊತೆ ಛಲವಾದಿ ನಾರಾಯಣಸ್ವಾಮಿ, ಅಧಿಕಾರಿ ಎನ್.ಮಂಜುನಾಥ ಪ್ರಸಾದ್ ಹೆಸರು ಕೇಳಿ ಬಂದಿವೆ. ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಟಿಕೆಟ್ ಪ್ರಯತ್ನದಲ್ಲಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ತ್ಯಾಗ ಮಾಡಿ ಬೇರೆ ಎರಡು ಕಡೆ ಸ್ಪರ್ಧೆ ಮಾಡಿ ಸೋತಿರುವ ಸೋಮಣ್ಣ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದರ ಜೊತೆ ತುಮಕೂರು ಲೋಕಸಭಾ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಇವರ ಜೊತೆ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಸಿದ್ದಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್ ಪರಮೇಶ್ ಆಕಾಂಕ್ಷಿಗಳಾಗಿದ್ದಾರೆ.
ಕೊಪ್ಪಳ ಕ್ಷೇತ್ರದಿಂದ ಮಾಜಿ ಸಚಿವ ಆನಂದ ಸಿಂಗ್, ವೈದ್ಯ ಡಾ.ಬಸವರಾಜ ಕೆವಟರ್ ಪ್ರಯತ್ನಿಸಿದ್ದಾರೆ. ಆದರೆ, ಜೆಡಿಎಸ್ ಮೈತ್ರಿಯಿಂದಾಗಿ ಯಾರಿಗೆ ಕ್ಷೇತ್ರ ಹಂಚಿಕೆಯಾಗಲಿದೆ ಎನ್ನುವುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಲಾಭಿ ನಡೆಯಲಿದೆ. ದಾವಣಗೆರೆ ಕ್ಷೇತ್ರದಿಂದ ಹಾಲಿ ಸಂಸದ ಜಿಎಂ ಸಿದ್ದೇಶ್ ಪುತ್ರ ಜಿಎಸ್ ಅನಿತ್ ಪರ ಲಾಬಿ ಮಾಡುತ್ತಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ನಿವೃತ್ತ ಸರ್ಕಾರಿ ಅಧಿಕಾರಿ ಕೊಟ್ರೋಶ್, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ಪುತ್ರ ಡಾ.ರವಿ ಆಕಾಂಕ್ಷಿಗಳಾಗಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಯಾರು ಆಕಾಂಕ್ಷಿಗಳು ಎನ್ನುವುದು ಇನ್ನು ಬಹಿರಂಗವಾಗಿಲ್ಲ.