ಬೆಂಗಳೂರು : ಏಕಾಏಕಿ ಪದಾಧಿಕಾರಿಗಳ ನೇಮಕ ಪಟ್ಟಿ ಬಿಡುಗಡೆ ಮಾಡದೇ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಸಂಘಟನಾತ್ಮಕವಾಗಿ ಪದಾಧಿಕಾರಿಗಳ ಸ್ಥಾನಕ್ಕೆ ನೇಮಿಸಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೂಚನೆ ನೀಡಿದ್ದಾರೆ.
ಬಣ ರಾಜಕೀಯಕ್ಕೆ ಅವಕಾಶ ನೀಡಬಾರದು.. ಕಟೀಲ್‌ಗೆ ಸಂತೋಷ್ ಸೂಚನೆ..
ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನ ನೇಮಿಸದಂತೆ ಬಿ. ಎಲ್. ಸಂತೋಷ್ ಸೂಚಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನಾ ವಿಷಯಗಳ ಕುರಿತು ಸಭೆ ನಡೆಸಲಾಯಿತು. ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನ ನೇಮಿಸದಂತೆ ಬಿ ಎಲ್ ಸಂತೋಷ್ ಸೂಚಿಸಿದ್ದಾರೆ.
ಈ ಹಿಂದೆ ಕೆಜೆಪಿ ಮತ್ತು ಬಿಜೆಪಿ ಅಂತಾ ಭಿನ್ನಾಭಿಪ್ರಾಯ ಬಂದ ಹಿನ್ನೆಲೆ ಪದಾಧಿಕಾರಿಗಳ ನೇಮಕದಲ್ಲಿ ಅಸಮಾಧಾನ ಕೇಳಿ ಬಂದಿತ್ತು. ಪದಾಧಿಕಾರಿಗಳ ನೇಮಕದಲ್ಲಾದ ಪ್ರಮಾದ ಕಳೆದ ವಿಧಾನಸಭೆ ಹಾಗೂ ಸ್ಥಳೀಯ ಚುನಾವಣೆಗಳ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಈ ಬಾರಿಯ ಪದಾಧಿಕಾರಿಗಳ ನೇಮಕ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪದಾಧಿಕಾರಿಗಳನ್ನ ನೇಮಿಸುವಂತೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಬಿ ಎಲ್ ಸಂತೋಷ್ ಖಡಕ್ ಸೂಚನೆ ನೀಡಿದ್ದಾರೆ.