ಬೆಂಗಳೂರು: ಮುಂಬರುವ ಲೋಕಸಭೆ ಹಾಗು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹಾಗು ಬಿಜೆಪಿ ಒಟ್ಟಾಗಿ ಹೋಗಿ ರಾಜ್ಯದ ಎಲ್ಲಾ ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ನಿರ್ಧಾರವನ್ನು ರಾಜ್ಯ ಬಿಜೆಪಿ ವರಿಷ್ಠರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು. ಕೇಂದ್ರಿಯ ಸಂಸದೀಯ ಮಂಡಳಿ ಸದಸ್ಯರು ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಸೇರಿ ಪ್ರಮುಖರು ಭಾಗಿಯಾಗಿದ್ದರು.
ಲೋಕಸಭಾ ಚುನಾವಣಾ ತಯಾರಿ, ಜೆಡಿಎಸ್ ಜೊತೆ ಸಮನ್ವಯತೆ ಸಾಧಿಸಿಕೊಂಡು ಮುಂದುವರೆಯುವುದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿರತ ಹೋರಾಟ ನಡೆಸಬೇಕು. ಜಿಲ್ಲಾ ಘಟಕಗಳನ್ನು ಸಂಪೂರ್ಣ ಸಕ್ರೀಯಗೊಳಿಸಿ ಚುನಾವಣೆ ಮುಗಿಯುವವರೆಗೂ ನಿರಂತರ ಚಟುವಟಿಕೆಯಿಂದ ಇರಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಿತು.
ಯತ್ನಾಳ್ ಮನವೊಲಿಕೆಗೆ ನಿರ್ಧಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪನವರ ವಿರುದ್ಧ ಮಾಡಿರುವ ಆರೋಪದ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಎಲ್ಲ ನಾಯಕರು ಒಕ್ಕೊರಲಿನಿಂದ ಯತ್ನಾಳ್ ಹೇಳಿಕೆಯನ್ನು ಖಂಡಿಸಿದರು. ಅವರು ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ, ಅದಕ್ಕೆ ಕಡಿವಾಣ ಹಾಕಬೇಕು. ಅಸಮಧಾನಿತ ಯತ್ನಾಳರನ್ನು ಹೈಕಮಾಂಡ್ ನಾಯಕರ ಮೂಲಕ ಮನವೊಲಿಕೆ ಮಾಡಬೇಕು ಎನ್ನುವ ನಿರ್ಧಾರವಾಯಿತು.