ಬೆಂಗಳೂರು: ಮಾಲೂರು ಘಟನೆಯನ್ನು ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಮಕ್ಕಳ ಮೇಲಿನ ದೌರ್ಜನ್ಯ ಕೋಲಾರದ ಮಾಲೂರು ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ನಡೆದಿರುವುದು ನೋಡಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಹಳಿತಪ್ಪಿದ ಆಡಳಿತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಬಿಂಬಿತವಾಗುತ್ತಿದೆ. ಅದರಲ್ಲೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರೇ ದೌರ್ಜನ್ಯ, ಶೋಷಣೆಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಮಾಲೂರಿನ ಘಟನೆಯಲ್ಲಿ ಮಕ್ಕಳನ್ನು ಮಲದ ಗುಂಡಿಗಿಳಿಸಿ ದೈಹಿಕ ದೌರ್ಜನ್ಯ ನಡೆಸಿರುವುದು ಅತ್ಯಂತ ಹೇಯ ಘಟನೆ. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ಅಲ್ಲದೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೈತಿಕ ಹೊಣೆ ಹೊರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ: ರಾಜ್ಯದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಮಾಲೂರು ತಾಲೂಕಿನಲ್ಲಿ ದಲಿತ ಶಾಲಾ ಮಕ್ಕಳನ್ನು ಮಲದ ಗುಂಡಿಗಿಳಿಸಿ ಸ್ವಚ್ಚ ಮಾಡಲು ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ. ಯಾರಿಗೂ ಭಯ ಇಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ. ಇಲ್ಲಿ ಮಹಿಳೆಯರು, ಮಕ್ಕಳು, ದಲಿತರಿಗೆ ಸುರಕ್ಷತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಇದ್ದೂ ಸತ್ತಂತಾಗಿದ್ದು, ನಿರ್ಜೀವ ಸರ್ಕಾರಕ್ಕೆ ರಾಜ್ಯದ ಜನತೆ ಹಿಡಿಶಾಪ ಹಾಕುವಂತಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.