ಕರ್ನಾಟಕ

karnataka

ETV Bharat / state

ಮೋದಿ ನಿದ್ರೆ ಸುಖ ಅರಿಯದ ತಪಸ್ವಿ ಆಡಳಿತಗಾರ,ಸಿದ್ದರಾಮಯ್ಯರದ್ದು ವಿಕೃತ ಆನಂದ: ಬಿಜೆಪಿ ನಾಯಕರ ತಿರುಗೇಟು

ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯ ಭರಿತ ಪೋಸ್ಟ್​ ಮಾಡಿದ್ದ ಸಿಎಂ ವಿರುದ್ಧ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಸಿಎಂ ವಿರುದ್ಧ ಬಿಜೆಪಿ ನಾಯಕರ ತಿರುಗೇಟು
ಸಿಎಂ ವಿರುದ್ಧ ಬಿಜೆಪಿ ನಾಯಕರ ತಿರುಗೇಟು

By ETV Bharat Karnataka Team

Published : Jan 17, 2024, 4:49 PM IST

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನಿದ್ರೆ ಸುಖವೇನೆಂದು ಅರಿಯದ ಒಬ್ಬ ತಪಸ್ವಿ ಆಡಳಿತಗಾರ. ಆದರೆ ನಿದ್ರೆ ಸಾಮ್ರಾಜ್ಯದ ಸಿದ್ದರಾಮಯ್ಯ ಮೋದಿಯವರ ಹೆಗಲ ಮೇಲೆ ತಮ್ಮ ನಿದ್ರೆ ಸುಖದ ಚಿತ್ರಣ ಸೃಷ್ಟಿಸಿ ವಿಕೃತ ಆನಂದ ಪಡೆಯಲು ಹೊರಟಿದ್ದಾರೆ. ಕೆಲಸ ಮಾಡುವುದಕ್ಕಿಂತ ಹೆಚ್ಚು ನಿದ್ರಾಸನದಲ್ಲಿಯೇ ಇರುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದು, ಸರಣಿ ಟ್ವೀಟ್​ಗಳ ಮೂಲಕ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೋದಿ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದು, ಸೂರ್ಯ ಮುಳುಗಿದರೆ ಕತ್ತಲೆ, ಚಂದ್ರ ಮೇಲೆದ್ದು ಬಂದರೆ ನಿದ್ರೆ, ಸೂರ್ಯ-ಚಂದ್ರರಿಬ್ಬರೂ ವಿಶ್ರಾಂತಿ, ಸುಖ ನಿದ್ರೆಗಳನ್ನು ಅನುಭವಿಸಿರಬಹುದು, ಆದರೆ ತಮ್ಮ ಬದುಕಿನ ಪುಟದಲ್ಲಿ ವಿರಮಿಸುವ ಪದವನ್ನೇ ಕಾಣದ, ನಿದ್ರೆ ಸುಖವೇನೆಂದು ಅರಿಯದ ಒಬ್ಬ ತಪಸ್ವಿ ಆಡಳಿತಗಾರನನ್ನು ಈ ದೇಶ ಕಂಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎನ್ನುವುದು ಅವರ ಜೀವನ ಚರಿತ್ರೆ ಹಾಗೂ ಹತ್ತು ವರ್ಷದ ಅವರ ಆಡಳಿತವನ್ನು ಕಣ್ಣಾರೆ ಕಂಡಿರುವ ಶತಕೋಟಿ ಭಾರತೀಯರು ಎದೆ ತಟ್ಟಿ ಹೇಳುತ್ತಾರೆ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

ಮೋದಿಯವರ ನಡೆ, ನುಡಿ, ಕ್ರಿಯಾಶೀಲತೆ ಶ್ರೀರಾಮಚಂದ್ರನ ಅನುಗ್ರಹದ ನೆರಳಿನಂತಿದೆ. 'ರಾಮ ರಾಜ್ಯದ ಪರಿಕಲ್ಪನೆ ಮೋದಿಯವರ ಕಾಲದಲ್ಲಿ ಮಾತ್ರ ಸಾಧ್ಯ' ಎನ್ನುವುದು ಜನವರಿ 22ರಂದು ಲೋಕಾರ್ಪಣೆಗೊಳ್ಳುತ್ತಿರುವ ಶ್ರೀರಾಮ ಮಂದಿರ ಹಾಗೂ ಬಾಲರಾಮನ ಪ್ರತಿಷ್ಠಾಪನೆಯ ಕ್ಷಣಗಳು ಸಾಕ್ಷಿ ಹೇಳಲಿವೆ. 'ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ' ನಿದ್ರೆ ಸಾಮ್ರಾಜ್ಯದ ಸಿದ್ದರಾಮಯ್ಯ ಅವರು ಮೋದಿಯವರ ಹೆಗಲ ಮೇಲೆ ತಮ್ಮ ನಿದ್ರೆ ಸುಖದ ಚಿತ್ರಣ ಸೃಷ್ಟಿಸಿ ವಿಕೃತ ಆನಂದ ಪಡೆಯಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ನಿದ್ರೆಯಿಂದ ಎಚ್ಚೆತ್ತುಕೊಳ್ಳಿ:ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿಯನ್ನು ಮಾಡಿದ್ದು, ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯರದ್ದು ನಿದ್ರಾಸನವೇ ಹೆಚ್ಚು:ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ ಶೂರನೂ ಅಲ್ಲ"ಎಂದು ಅಲ್ಲಮ ಪ್ರಭು ದೇವರು ಹೇಳಿದ್ದಾರೆ. "ಕೈಲಾಗದವ ಮೈಪರಚಿಕೊಂಡ" ಎಂಬ ಗಾದೆಯಂತೆ, ಆಡಳಿತ ನಡೆಸಲಾಗದೆ ರಾಜ್ಯದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಹಾಳುಗೆಡವುತ್ತಿರುವ ವ್ಯಕ್ತಿಯೊಬ್ಬರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕುರಿತಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಕನ್ನಡಿಗರ ದುರಂತ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ನಿದ್ರೆ ಮಾಡುತ್ತಿರುವ ವ್ಯಂಗ್ಯಭರಿತ ಫೋಟೋ ಟ್ವೀಟ್ ಮಾಡಿ ಸಿಎಂ ಸರಣಿ ಟೀಕೆ

ABOUT THE AUTHOR

...view details