ಬೆಂಗಳೂರು : ಐಎಂಐ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ಪರಾರಿಯಾಗಲು ಬಿಜೆಪಿ ನಾಯಕರು ಸಹಾಯಮಾಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ.
ರೋಷನ್ ಬೇಗ್ ಐಎಂಎ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದರು. ಇಂದು ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಾರ್ಟರ್ಡ್ ಫ್ಲೈಟ್ನಲ್ಲಿ ಮುಂಬೈಗೆ ತೆರಳುತ್ತಿರುವಾಗ ವಿಧಾನಸಭೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಸಹ ಜೊತೆಗಿದ್ದರು. ಎಸ್ಐಟಿ ತನಿಖಾ ತಂಡ ರೋಷನ್ ಬೇಗ್ ಅವರನ್ನು ಬಂಧಿಸಿದ ತಕ್ಷಣ ಸಂತೋಷ್ ಅಲ್ಲಿಂದ ತೆರಳಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಈ ವೇಳೆ ಬಿಜೆಪಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸಹ ಇದ್ದರು. ಐಎಂಎ ವಂಚನೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ರೋಷನ್ ಬೇಗ್ ಪರಾರಿಯಾಗಲು ಬಿಜೆಪಿ ಸಹಾಯಮಾಡುತ್ತಿರುವುದನ್ನ ಗಮನಿಸಿದರೆ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯ ಕೈವಾಡವಿದೆ ಎಂದೆನಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.