ಕರ್ನಾಟಕ

karnataka

ETV Bharat / state

ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಬೆತ್ತಲಾಗಿದ್ದು, ನಿಜ ಬಣ್ಣ ಬಯಲಾಗುತ್ತಿದೆ: ಮಾಜಿ ಸಂಸದ ವಿ.ಎಸ್ ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ವಿರುದ್ಧ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಕ್ರೋಶ ಹೊರಹಾಕಿದರು.

ಮಾಜಿ ಸಂಸದ ವಿ.ಎಸ್ ಉಗ್ರಪ್ಪ
ಮಾಜಿ ಸಂಸದ ವಿ.ಎಸ್ ಉಗ್ರಪ್ಪ

By

Published : Jul 2, 2023, 8:53 PM IST

ಬೆಂಗಳೂರು : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಬೆತ್ತಲಾಗಿದ್ದಾರೆ. ಅವರ ನಿಜವಾದ ಬಣ್ಣ ಬಯಲಾಗುತ್ತಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ಮಾಜಿ ಸಚಿವ ಹೆಚ್.ಎಂ ರೇವಣ್ಣ ಜತೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.

ಶಾಸಕರಾಗಲು, ಮಂತ್ರಿಯಾಗಲು ಏನೆಲ್ಲ ಮಾಡಿದ್ದರು. ಹೇಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂಬುದರ ಬಗ್ಗೆ ಬಿಜೆಪಿ ಅವರೇ ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷದಲ್ಲಿದ್ದಾಗ ರಾಜ್ಯವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಪ್ರವೃತ್ತಿಯನ್ನು ಅವರು ತೋರಲಿಲ್ಲ. ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವು ಅನ್ನ ಭಾಗ್ಯ ಯೋಜನೆ ಜಾರಿ ಮಾಡಿ ಬಡವರಿಗೆ ಉಚಿತ ಅಕ್ಕಿ ನೀಡುವ ಕೆಲಸ ಮಾಡುತ್ತಿದೆ ಎಂದು ಉಗ್ರಪ್ಪ ಹೇಳಿದರು.

ಬಡವರ ಹಸಿವನ್ನು ಅರಿತ ಕಾಂಗ್ರೆಸ್ ಸರ್ಕಾರ ಈ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿಯನ್ನು ನೀಡಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಇದನ್ನು 5 ಕೆಜಿಗೆ ಇಳಿಸಿತ್ತು. ಜನರ ಸಂಕಷ್ಟ ಹರಿತ ಕಾಂಗ್ರೆಸ್ ಈ ಬಡವರಿಗೆ ತಲ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿತು. ಅಧಿಕಾರಕ್ಕೆ ಬಂದ ದಿನವೇ ತನ್ನ ಯೋಜನೆಗಳಿಗೆ ಚಾಲನೆ ನೀಡಿರುವಂತಹ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಮ್ಮ ಯೋಜನೆಗಳ ಬಗ್ಗೆ ಟೀಕೆ ಮಾಡುವ ಬಿಜೆಪಿ ನಾಯಕರು ತಾವು 2018ರ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಗಳ ಪೈಕಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಎಂದು ಉಗ್ರಪ್ಪ ಪ್ರಶ್ನಿಸಿದರು.

2014ರಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳ ಪೈಕಿ ಎಷ್ಟನ್ನು ಈಡೇರಿಸಿದ್ದಾರೆ? ಕೇವಲ 100 ದಿನಗಳಲ್ಲಿ ಜನಸಾಮಾನ್ಯರ ದಿನ ಬಳಕೆ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು. ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆಗಳನ್ನು ಇಳಿಸುವುದಾಗಿ ಹೇಳಿದ್ದರು. 9 ವರ್ಷ ಕಳೆದರೂ ಯಾವುದನ್ನು ಈಡೇರಿಸಲಿಲ್ಲ. ಬದಲಿಗೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ.

ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. 9 ವರ್ಷಗಳಲ್ಲಿ ಒಟ್ಟು 18 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಇದ್ದ ಉದ್ಯೋಗಗಳು ಮಾಯವಾಗುತ್ತಿವೆ.‌ ವಿದೇಶಗಳಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಅಣ್ಣ ತಂಗಿ ಯೋಜನೆಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿ ಖರೀದಿ ಮಾಡುವವರೆಗೂ ಪ್ರತಿ ಕೆಜಿಗೆ 34 ರಂತೆ ಬಡ ಕುಟುಂಬದ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 170ಗಳನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ನಮ್ಮ ಸರ್ಕಾರ ಹೇಳಿದರೆ, ಬಿಜೆಪಿ ನಾಯಕರು ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.

ಅಧಿಕಾರ ಕಳೆದುಕೊಂಡಿರುವುದು ಒಂದು ಕಡೆಯಾದರೆ, ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದರಿಂದ ಹತಾಶಗೊಂಡಿರುವ ಬಿಜೆಪಿ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಈಗಾಗಲೇ ಶಕ್ತಿ ಯೋಜನೆಗಳ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ, ಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ, ಅನ್ನಭಾಗ್ಯದ ಮೂಲಕ ಬಡ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹತಾಶರಾಗಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಬಳಿ ಅಕ್ಕಿ ದಾಸ್ತಾನು ಇದ್ದರೂ ಖಾಸಗಿ ಅವರಿಗೆ ಮುಕ್ತ ಮಾರುಕಟ್ಟೆಯಲ್ಲಿ ಹರಾಜು ಹಾಕುತ್ತಿದೆ. ಆದರೆ ಬಡವರಿಗೆ ನೀಡಲು ಅಕ್ಕಿಯನ್ನು ಕರ್ನಾಟಕ ರಾಜ್ಯಕ್ಕೆ ನೀಡುತ್ತಿಲ್ಲ. ಬಡವರ ಅನ್ನದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ? ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರು ಕೇಂದ್ರ ಸರ್ಕಾರದ ಮೇಲೆ ಯಾಕೆ ಒತ್ತಡ ಹಾಕಿಲ್ಲ? ಇಂತಹ ಜನ ವಿರೋಧಿ ಪ್ರವೃತ್ತಿ ಇರುವ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ. ಬಿಜೆಪಿಯವರಿಗೆ ಪಕ್ಷ ನಿಷ್ಠೆಯೇ ಇಲ್ಲ, ಇನ್ನು ಸಮಾಜ ಹಾಗೂ ಜನರ ಬಗ್ಗೆ ನಿಷ್ಠೆ ಇರಲು ಸಾಧ್ಯವೇ? ಎಂದು ಉಗ್ರಪ್ಪ ಕೇಳಿದರು.

ರಾಜ್ಯ ಸರ್ಕಾರ ವರ್ಗಾವಣೆ ದಂಧೆ ಮಾಡುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕುಮಾರಸ್ವಾಮಿ ಅವರು ಅವರ ಕುಟುಂಬದಿಂದ ಮೂರು ಬಾರಿ ಮುಖ್ಯಮಂತ್ರಿಗಳಾಗಿದ್ದು, ಅವರ ತಂದೆ ಪ್ರಧಾನ ಮಂತ್ರಿಗಳು ಆಗಿದ್ದಾರೆ. ಅಂತಹ ಕುಟುಂಬದ ಹಿನ್ನೆಲೆ ಹೊಂದಿರುವ ಕುಮಾರಸ್ವಾಮಿ ಅವರು ಇಂತಹ ನಗುವಾದ ಮಾತನಾಡಿರುವುದು ಅವರ ಹತಾಶೆಯನ್ನು ತೋರಿಸುತ್ತದೆ.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು, ಸಿಂಗಪುರ್ ನಿಂದ ನಿಯಂತ್ರಣ ಮಾಡಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ರಾಜ್ಯದ ಜನರು ಪ್ರಭುದ್ಧರಾಗಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಸುಭದ್ರ ಸರ್ಕಾರ ರಚಿಸಿದ್ದಾರೆ. ಇದನ್ನು ಸಹಿಸಲಾಗದವರು ಇಂತಹ ಮಾತುಗಳಾಡುತಿದ್ದಾರೆ" ಎಂದು ಉಗ್ರಪ್ಪ ತಿಳಿಸಿದರು.

ಇದೇ ಪ್ರಶ್ನೆಗೆ ಪ್ರತಿಕ್ರಿಸಿದ ಮಾಜಿ ಸಚಿವ ಹೆಚ್.ಎಂ ರೇವಣ್ಣ ಮಾತನಾಡಿ, "ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಏನೆಲ್ಲ ಮಾತನಾಡಿದ್ದಾರೆ ಎಂದು ರಾಜ್ಯದ ಜನತೆ ನೋಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಹೇಳಿದ್ದರು. ನಮ್ಮ ಸರ್ಕಾರದಲ್ಲಿ ವರ್ಗಾವಣೆ ಆರಂಭವಾಗಿಲ್ಲ. ಕೂಸು ಹುಟ್ಟುವ ಮುನ್ನ ತುಂಬಾ ಮುನ್ನ ಕುಲಾಯಿ ಹೊಲಿಸಿದರು ಎಂಬ ಮಾತಿನಂತೆ ಕುಮಾರಸ್ವಾಮಿಯವರು ಆರೋಪ ಮಾಡುತ್ತಿದ್ದಾರೆ" ಎಂದರು.

ಇದನ್ನೂ ಓದಿ :CM Siddaramaiah: ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿಯಾದೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details