ಬೆಂಗಳೂರು : ಕಾವೇರಿ ವಿಚಾರ, ರಾಜ್ಯದ ಹಿತಾಸಕ್ತಿಯ ವಿಚಾರಗಳಿಗೆ ಪ್ರಧಾನಿ ಮೋದಿಯವರ ಎದುರು ನಿಂತು ಮಾತನಾಡುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕರ್ನಾಟಕಕ್ಕೆ ತೊಂದರೆ ಆಗಿರುವುದೇ ಇಂತಹ ನಾಯಕರಿಂದ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕುಮಾರಕೃಪಾ ಅತಿಥಿಗೃಹದ ಬಳಿ ಇಂದು ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೇಂದ್ರ ಪರಿಸರ ಇಲಾಖೆಯಿಂದ ಅನೇಕ ಕಾಮಗಾರಿಗೆ ನಿರಾಕ್ಷೇಪಣಾ ಪತ್ರ ತರಲು ಬಿಜೆಪಿ ಕೈಯಲ್ಲಿ ಆಗಿಲ್ಲ. ರಾಜ್ಯದ ಅಭಿವೃದ್ದಿಗೆ ಅವರಿಂದಲೇ ತೊಂದರೆ ಆಗುತ್ತಿದೆ. ನೀರಿನ ವಿಚಾರದಲ್ಲಿ ರಾಜಕಾರಣ ನಮಗೆ ಬೇಕಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎನ್ನುವುದು ನನ್ನ ಧೋರಣೆ. ಬಿಜೆಪಿಯವರು ನನಗೆ ಬೈಯಲಿ, ಉಗಿಯಲಿ, ಏನು ಬೇಕಾದರೂ ಹೇಳಲಿ, ನಾನು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡುತ್ತೇನೆ ಎಂದರು.
ಎಲ್ಲಾ ನದಿ ವ್ಯಾಜ್ಯಗಳು ಮೂರು ವರ್ಷಗಳಲ್ಲಿ ಇತ್ಯರ್ಥವಾಗಬೇಕು ಎಂದು ಕೇಂದ್ರ ಸರ್ಕಾರವೇ ಕಾನೂನು ಮಾಡಿದೆ. ಅವರೇ ಎರಡೂ ರಾಜ್ಯಗಳನ್ನು ಕೂರಿಸಿಕೊಂಡು ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂತೆಂಥ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಇದು ಆಗುವುದಿಲ್ಲವೇ?. ಮೇಕೆದಾಟು ಯೋಜನೆ ಆಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಹೇಳಿದರು.
ಇಂಡಿಯಾ ಸಭೆ ಮಾಡುತ್ತಾರೆ. ನೀರಿನ ವಿಚಾರಕ್ಕೆ ಸಭೆ ನಡೆಸಲು ಆಗುವುದಿಲ್ಲವೇ? ಎನ್ನುವ ಪ್ರತಿಪಕ್ಷಗಳ ಪ್ರಶ್ನೆಗೆ, ನಾವು ಎಲ್ಲಾ ಸಭೆ ಮಾಡಿದ್ದೇವೆ. ಆಯಾಯಾ ನಾಯಕರಿಗೆ ಅವರ ರಾಜ್ಯಗಳ ಹಿತಾಸಕ್ತಿ ಮುಖ್ಯ. ಮೇಲೆ ಕುಳಿತಿರುವ ಕೇಂದ್ರ ಸರ್ಕಾರಕ್ಕೆ ವಾಸ್ತವಾಂಶ ಗೊತ್ತಿದೆ. ಇಬ್ಬರನ್ನು ಕರೆಸಿ ಮಾತುಕತೆ ನಡೆಸಲಿ ಎಂದು ಒತ್ತಾಯಿಸಿದರು.