ಬೆಂಗಳೂರು :ಕಾಂಗ್ರೆಸ್ನ ಎತ್ತಿನಹೊಳೆ ಹೋರಾಟ ಎತ್ತು ಒಂದು ಕಡೆ ಹೊಳೆ ಒಂದು ಕಡೆಯಾದಂತಾಗಿತ್ತು. ಈಗ ಮೇಕೆ ತಿನ್ನುತ್ತಾ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಮಾಡುತ್ತಿರುವ ಇವರ ರಾಜಕೀಯ ಗಿಮಿಕ್ ವರ್ಕೌಟ್ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ನವರು ಕೋಲಾರಕ್ಕೆ ಎತ್ತಿನ ಹೊಳೆ ನೀರು ತರ್ತೇವೆ ಎಂದರು. ಆದರೆ, ಈಗ ಎತ್ತು ಒಂದು ಕಡೆ ಹೊಳೆ ಒಂದು ಕಡೆ ಆಗಿದೆ. ದಾರಿಯುದ್ಧಕ್ಕೂ ಮೇಕೆ ತಿನ್ನುತ್ತಾ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಈ ರೀತಿ ಪಾದಯಾತ್ರೆಯಾದರೆ ಜೀವನದುದ್ಧಕ್ಕೂ ಮಾಡಬಹುದು, ಇದು ವಿವಿಐಪಿ ಪಾದಯಾತ್ರೆ ಎಂದರು.
ಮೇಕೆದಾಟಿಗೆ ಅಡ್ಡ ಹಾಕಿದ್ದು ಯಾರು? ಸ್ಟಾಲಿನ್ ತಾನೆ. ಸ್ಟಾಲಿನ್ ಯಾರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದು? ಅದೇ ನಮ್ಮವರಾಗಿದ್ದರೆ ಕಿವಿ ಹಿಂಡಿ ನೀರು ಬಿಡಿಸುತ್ತಾ ಇದ್ದೆವು. ನಮ್ಮ ಪಾರ್ಟಿ ಜಾತಿ ಆಧಾರದಲ್ಲಿ ಬೆಳೆದಿಲ್ಲ. ನಮ್ಮ ಪಕ್ಷ ನೀತಿ ಆಧಾರದ ಮೇಲೆ ಬೆಳೆದಿದೆ.
ದೇಶ ಮೊದಲು ಎನ್ನುವ ಪಕ್ಷ ನಮ್ಮದು. ಕೆಲವು ಪಕ್ಷದಲ್ಲಿ ವ್ಯಕ್ತಿ ಮೊದಲು, ಪಕ್ಷ ಬಳಿಕ ದೇಶ ಕೊನೆ ಎನ್ನುವುದು ಇದೆ. ನಮ್ಮ ಪಕ್ಷದಲ್ಲಿ ಸ್ವಾರ್ಥಕ್ಕೆ ಅವಕಾಶ ಇಲ್ಲ. ತಮ್ಮದೆ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿದರು, ಅದೇ ಬೆಂಕಿಯಲ್ಲಿ ಚಳಿ ಕಾಣಿಸಿಕೊಂಡವರು ಕಾಂಗ್ರೆಸ್ನವರು.
ಬೆಂಕಿ ಹಾಕಿದವರನ್ನು ತಮ್ಮ ಬ್ರದರ್ಸ್ ಎಂದು ಕರೆದವರು ಕಾಂಗ್ರೆಸ್ನವರು. ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಓನರ್, ಜೆಡಿಎಸ್‌ನಲ್ಲಿ ದೊಡ್ಡಗೌಡರು ಓನರ್, ಕಾಂಗ್ರೆಸ್ಗೆ ಸೋನಿಯಾ ಗಾಂಧಿ ಓನರ್ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:'ಆಳಂದ ಚಲೋ'..ಬೂದಿ ಮುಚ್ಚಿದ ಕೆಂಡದಂತಿದೆ ಕಲಬುರ್ಗಿಯ ಈ ಪಟ್ಟಣ
ನನ್ನ ಅಪ್ಪ ಅಂದು ಜೆಡಿಎಸ್ ಸೇರು ಎಂದಿದ್ದರು. ಅಪ್ಪನ ಮಾತು ಕೇಳಿದ್ದರೆ, ನಾನು ದೊಡ್ಡಗೌಡರಿಗೆ ಜೈ ಎಂದು ಅವರ ಮಕ್ಕಳಿಗೆ, ಮೊಮ್ಮಕಳಿಗೆ ಜೈ ಎಂದು ಕೂರಬೇಕಿತ್ತು ಎಂದು ಜೆಡಿಎಸ್ ಬಗ್ಗೆ ಸಿ ಟಿ ರವಿ ವ್ಯಂಗ್ಯವಾಡಿದರು.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಭಾರತ ಮನವಿ ಮಾಡಿಕೊಂಡಿದೆ. ಇದು ಭಾರತಕ್ಕೆ ಇರುವ ಗೌರವ. ಈಗ ಭಾರತದ ಪಾಸ್ ಪೋರ್ಟ್ಗೆ ಬೆಲೆ ಇದೆ. ಅಪ್ಪನ ಆಣೆ ಮೋದಿ ಪಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
ಈಗ ನಾವು ಸಿದ್ದರಾಮಯ್ಯರನ್ನ ಕೇಳಬಹುದಾ ಅಪ್ಪನ ಆಣೆ ಹಾಕಿದ್ರಲ್ಲ ಎಂದು? ನಾವು ಹೇಳುತ್ತೇವೆ ಸಿದ್ದರಾಮಯ್ಯರೆ ಅಪ್ಪನ ಆಣೆ ನೀವು ಸಿಎಂ ಆಗಲ್ಲ ಎಂದು ಸಿಟಿ ರವಿ ಸಿದ್ದರಾಮಯ್ಯ ಅವರ ಕಾಲೆಳೆದರು.
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಯಲ್ಲಿ ಗುಂಪುಗಾರಿಕೆ ಅನ್ನೋದು ಇಲ್ಲ. ಆ ಗುಂಪುಗಾರಿಕೆ ಇರೋದು ಕಾಂಗ್ರೆಸ್ನಲ್ಲಿ. ರಾಹುಲ್ ಗಾಂಧಿಯವರು, ರಾಜ್ಯ ಕಾಂಗ್ರೆಸ್ ನಾಯಕರನ್ನು ದೆಹಲಿಗೆ ಕರೆಸಿ ಗುಂಪುಗಾರಿಕೆ ಸರಿ ಅಲ್ಲ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇದು ಕಾಂಗ್ರೆಸ್ಗೆ ಬಂದಿರುವ ಗತಿ ಎಂದರು.
ಸಿದ್ದು, ಡಿಕೆಶಿ ನಿಯಂತ್ರಣಕ್ಕೆ ಸುರ್ಜೇವಾಲಾ :ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ನವರು ಭಾರತ್ ಮತಾಕಿ ಜೈ ಎಂದು ಎಲ್ಲಿಯೂ ಹೇಳಿರಲಿಲ್ಲ. ಅವರು ಇಲ್ಲಿವರೆಗೂ ಹೇಳಿದ್ದು ಬರೀ ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಜೈ ಎಂದು ಮಾತ್ರ. ಆದರೆ, ಮೊನ್ನೆ ಸಿಎಎ ಗಲಾಟೆ ಆದಾಗ ಪ್ರಧಾನಮಂತ್ರಿಗಳು ಕಾಂಗ್ರೆಸ್ ನವರಿಂದ ಭಾರತ್ ಮತಾಕಿ ಜೈ ಎಂದು ಘೋಷಣೆ ಕೂಗಿಸಿದರು ಎಂದರು.
ಈಗ ಕಾಂಗ್ರೆಸ್ನವರು ಪಾದಯಾತ್ರೆ ಮಾಡ್ತಿರೋದು ಅಧಿಕಾರಕ್ಕಾಗಿ ಮಾತ್ರ. ಅವರು ಸುದೀರ್ಘವಾದ ಅಧಿಕಾರದಲ್ಲಿ ಇರುವಾಗ ನೀರು ಕೊಡಬೇಕು ಎಂದು ಅನ್ನಿಸಿರಲಿಲ್ಲಿ, ಈಗ ಅನ್ನಿಸಿಬಿಟ್ಟಿದೆ. ನಮ್ಮ ಕಡೆ ಕಂಬಳ ಆಟ ಇದೆ, ಆ ಕಂಬಳಕ್ಕೆ ಎರಡು ಜೋಡೆತ್ತುಗಳನ್ನು ಕಟ್ಟಿ ಓಡಿಸುತ್ತಾರೆ. ಅದರಂತೆ ಕಾಂಗ್ರೆಸ್ನಲ್ಲಿ ಎರಡು ಜೋಡೆತ್ತುಗಳನ್ನು ಓಡಿಸಲು ಸುರ್ಜೇವಾಲಾರನ್ನು ರಾಹುಲ್ ಗಾಂಧಿ ಬಿಟ್ಟಿದ್ದಾರೆ. ಯಾಕೆಂದರೆ, ಅವರು ಯಾವಾಗಲೂ ಒಬ್ಬರಿಗೊಬ್ಬರು ಸಂಘರ್ಷಕ್ಕೆ ಬೀಳುತ್ತಾರೆ ಅಂತಾ ಸುರ್ಜೇವಾಲಾರನ್ನು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಂದಿನ 10 ವರ್ಷ ಕಾಂಗ್ರೆಸ್ ಅಧಿಕಾರಕ್ಕೇರಲ್ಲ: ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿಗೆ ಹೋದವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಗಲಾಟೆ ಮಾಡಿ ಜೈಲಿಗೆ ಹೋದವರು ಯೂತ್ ಕಾಂಗ್ರೆಸ್ ಅಧ್ಯಕ್ಷರು, ಇವರ ಪಾದಯಾತ್ರೆ ಜನರಿಗೆ ಕಣ್ಣೀರು ತರಿಸಲು, ಗಲಭೆ ಎಬ್ಬಿಸಲು ಮಾತ್ರ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅರ್ಧ ಕಾಂಗ್ರೆಸ್ ಖಾಲಿ ಆಗುತ್ತದೆ.
ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಅವರಲ್ಲೇ ಒಳ ಜಗಳ ಜೋರಾಗಿ ಇದೆ. ನಾನು ಪ್ರಮಾಣ ಮಾಡಿ ಹೇಳ್ತೀನಿ, ಮುಂದಿನ 10 ವರ್ಷ ನೀವು ಅಧಿಕಾರಕ್ಕೆ ಬರೋದಿಲ್ಲ ಎಂದು ಕಟೀಲ್ ಭವಿಷ್ಯ ನುಡಿದರು.