ಬೆಂಗಳೂರು:ಅತೃಪ್ತ 14 ಶಾಸಕರ ಅನರ್ಹ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಹೇಳಿದ್ದಾರೆ.
ಮೈತ್ರಿ ನಾಯಕರ ಓಲೈಕೆಗೆ ಸ್ಪೀಕರ್ ಈ ರೀತಿ ನಡೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ, ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ಶಾಸಕ ಮಾಧುಸ್ವಾಮಿ:
ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಮಾಧುಸ್ವಾಮಿ, ನಾಳೆಯ ಬಹುಮತ ಸಾಬೀತಿನ ಮೇಲೆ ಸ್ಪೀಕರ್ ತೀರ್ಮಾನ ಯಾವುದೇ ಪರಿಣಾಮ ಬೀರುವುದಿಲ್ಲ. ಅವ್ರು ಇದ್ದಿದ್ರೂ ಇಲ್ಲಿಗೆ ಬರ್ತಿರಲಿಲ್ಲ. ಸ್ಪೀಕರ್ ಅವರಿಗೆ ನಿನ್ನೆಯವರೆಗೆ ಅವಕಾಶ ಇತ್ತೇನೋ. ಅವರು ಬರ್ಲಿಲ್ಲ ಅಂತಾ ಅನರ್ಹ ಮಾಡಿರಬಹುದು.
ಸ್ಪೀಕರ್ ಸ್ವಲ್ಪ ಎಡವಿದ್ದಾರೆ ಅನ್ನಿಸುತ್ತೆ. ಅವ್ರು ಸುಪ್ರೀಂನ ಆದೇಶವನ್ನು ಪರಿಗಣಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವ್ರೇ ಹೇಳ್ಬೇಕಿದೆ ಎಂದು ಬಿಎಸ್‌ವೈ ನಿವಾಸದ ಬಳಿ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಶಾಸಕ ಬಸವರಾಜ್ ಬೊಮ್ಮಾಯಿ:
ವಿಪ್ ಕೊಡಬೇಕು ಬಿಡಬೇಕು ಅನ್ನೋದು ಪಕ್ಷಕ್ಕೆ ಬಿಟ್ಟದ್ದು. ವಿಧಾನ ಮಂಡಲದ ದುರುಪಯೋಗ ಸರಿಯಲ್ಲ. ಸ್ಪೀಕರ್ ತೀರ್ಪು ಸರಿಯಿಲ್ಲ. ಇದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ಇದು ಹೊಸ ವ್ಯಾಖ್ಯಾನ ಪಡೆಯುತ್ತೆ. ಶಾಸಕರು ರಾಜೀನಾಮೆ ನೀಡಲು ಸರ್ವ ಸ್ವತಂತ್ರರು ಇದ್ದಾರೆ. ನಾಳೆ ಬಿಜೆಪಿ ಬಹುಮತ ಪಡೆಯುತ್ತದೆ ಎಂದು ಶಾಸಕ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್:
ಈ ಕುರಿತು ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸ್ಪೀಕರ್ ನಿರ್ಧಾರ ಅನುಮಾನಸ್ಪದವಾಗಿದೆ. ಉಮೇಶ್ ಜಾಧವ್ ವಿಚಾರದಲ್ಲಿ, ಈಗ ಈ ಶಾಸಕರ ವಿಚಾರದಲ್ಲಿ ವ್ಯತಿರಿಕ್ತ ನಡವಳಿಕೆ ತೋರಿದ್ದಾರೆ. ರಾಜೀನಾಮೆ ಅರ್ಜಿಗಳು ಮೊದಲು ಸಲ್ಲಿಕೆ ಆಗಿದ್ವು. ಬಳಿಕ ಅನರ್ಹತೆ ಅರ್ಜಿ ಸಲ್ಲಿಕೆ ಆಗಿದೆ. ಆದರೆ ಸ್ಪೀಕರ್ ರಾಜೀನಾಮೆ ಇತ್ಯರ್ಥ ಬದಲು ಅನರ್ಹ ಮಾಡಿದ್ದಾರೆ. ಇದು ದುರುದ್ದೇಶಪೂರಿತ ತೀರ್ಪು. ಕಾನೂನು ಬಾಹಿರ ತೀರ್ಪು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸ್ಪೀಕರ್ ನಿರ್ಧಾರ ಖಂಡಿಸಿದ ಬಿಜೆಪಿ ನಾಯಕರು ಸಂಸದ ರಾಜೀವ್ ಚಂದ್ರಶೇಖರ್:
ಸುಪ್ರೀಂಕೋರ್ಟ್ನಲ್ಲಿ ಸ್ಪೀಕರ್ ತೀರ್ಪು ಕೆಲವೇ ಗಂಟೆಗಳಲ್ಲಿ ಬಿದ್ದು ಹೋಗುತ್ತದೆ. ಸ್ಪೀಕರ್ ತೀರ್ಪು ಯಾರಿಗೂ ಸಮಾಧಾನ ತಂದಿಲ್ಲ. ಮುಂದೆ ಕಾನೂನು ಹೋರಾಟ ನಡೆಯುತ್ತದೆ. ಸ್ಪೀಕರ್ ತಮ್ಮ ವ್ಯಕ್ತಿತ್ವಕ್ಕೂ, ಸದನಕ್ಕೂ ಕಪ್ಪು ಚುಕ್ಕೆ ತಂದಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ. ಅವಿಶ್ವಾಸ ನಿರ್ಣಯ ಬಗ್ಗೆ ಈಗ ಚರ್ಚೆ ಅಪ್ರಸ್ತುತ. ಸ್ಪೀಕರ್ ಆದೇಶ ಕಾನೂನು ಬಾಹಿರ, ದುರುದ್ದೇಶಪೂರಿತವಾಗಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸ್ಪೀಕರ್ ಅವರ ಆದೇಶ ಭ್ರಷ್ಟ ಸರ್ಕಾರದ ವಿರುದ್ಧ ಬಂಡಾಯ ಎದ್ದ ಶಾಸಕರ ವಿರುದ್ಧ ಹಾಗೂ ತಮ್ಮ ನಾಯಕ ಸಿದ್ದರಾಮಯ್ಯನವರ ಪರವಾಗಿ ರಮೇಶ್ ಕುಮಾರ್ ತೆಗೆದುಕೊಂಡ ಕೀಳು ಪ್ರತೀಕಾರದ ಕ್ರಮವಾಗಿದೆ ಎನ್ನದೇ ಬೇರೆ ವಿಧಿಯಿಲ್ಲ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.