ಬೆಂಗಳೂರು: ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಿ ಹಾಗೂ ಹೆಚ್ಡಿಕೆ ಅವರ ತಂದೆ ಹೆಚ್.ಡಿ. ದೇವೇಗೌಡ ಸೇರಿದಂತೆ ಹೆಚ್ಡಿಕೆ ಆಪ್ತ ವಲಯ ಹಾಗೂ ಬಿಜೆಪಿ ನಾಯಕರಿಂದ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಹೆಚ್ಡಿಕೆ ಈ ಬಾರಿ ಹುಟ್ಟುಹಬ್ಬವನ್ನು ತಮ್ಮ ಆಪ್ತರೊಂದಿಗೆ ಸಿಂಗಾಪುರದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಂಸದ ಬಿ ವೈ ರಾಘವೇಂದ್ರ ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
"ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ." ಬಿ ಎಸ್ ಯಡಿಯೂರಪ್ಪ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, "ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ರಾಷ್ಟ್ರ ಹಿತಾಸಕ್ತಿಗಾಗಿ ಕೈಜೋಡಿಸಿರುವ ನಿಮಗೆ ದೇವರು ಉತ್ತಮ ಆಯುರಾರೋಗ್ಯ ಕರುಣಿಸಿ ಸಾರ್ವಜನಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲೆಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.
ಹೆಚ್ ಡಿ ದೇವೇಗೌಡ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ನನ್ನ ಪುತ್ರ, ಮಾಜಿ ಮುಖ್ಯಮಂತ್ರಿ ಹಾಗು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಸುದೀರ್ಘ ಅವಧಿ ಜನಸೇವೆ ಮಾಡುವ ಅವಕಾಶವನ್ನು ನೀಡಲಿ ಎಂದು ಹಾರೈಸುತ್ತೇನೆ. ಶುಭವಾಗಲಿ." ಎಂದು ಹಾರೈಸಿದ್ದಾರೆ.
ಹೆಚ್ಡಿಕೆ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಸಿಂಗಾಪುರದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಒಂದು ದಿನ ಮುಂಚೆಯೇ ತಾವು ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮನೆ ಬಳಿ ಬಾರದೆ ತಾವು ಇದ್ದಲ್ಲಿಯೇ ಜನುಮದಿನಕ್ಕೆ ಶುಭ ಹಾರೈಸುವಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಟುಂಬ ಹಾಗೂ ಕೆಲವು ಆಪ್ತರೊಂದಿಗೆ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಪೋಸ್ಟ್ನಲ್ಲಿ "ನನ್ನ ಜನ್ಮದಿನವಾದ ಡಿಸೆಂಬರ್ 16ರಂದು, ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ. ಕಾರ್ಯಕರ್ತರಾದಿಯಾಗಿ ನನ್ನ ಮೇಲೆ ಪ್ರೀತಿ, ವಾತ್ಸಲ್ಯ ಇರಿಸಿರುವ ಪ್ರತಿಯೊಬ್ಬರೂ ನನ್ನ ವೈಯಕ್ತಿಕ ಭೇಟಿಗೆ ಪ್ರಯತ್ನಿಸದೇ ತಾವು ಇದ್ದಲ್ಲಿಂದಲೇ ಶುಭ ಕೋರಬೇಕಾಗಿ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ." ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು.
ಇದನ್ನೂ ಓದಿ:ಯಶ್ ರಾಧಿಕಾ ಪುತ್ರಿ ಐರಾ ಗ್ರ್ಯಾಂಡ್ ಬರ್ತ್ಡೇ ಸೆಲೆಬ್ರೇಶನ್ - ವಿಡಿಯೋ ನೋಡಿ