ಬೆಂಗಳೂರು:''ಸಿಎಂ ಬಾಗಿಲಲ್ಲಿ ನಿಂತುಕೊಂಡು ದೇವರಿಗೆ ನಮಸ್ಕರಿಸಿದ್ದಾರೆ. ದೇವರಿಗೆ ಹಾಕಲು ನನ್ನ ಕೈಯಲ್ಲಿ ಹೂವಿನ ಹಾರ ಕೊಟ್ಟು ತಲೆ ಬಾಗಿ ನಮಸ್ಕಾರ ಮಾಡಿದ್ದಾರೆ'' ಎಂದು ಸಚಿವ ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು.
ದೇವಸ್ಥಾನದೊಳಗೆ ಹೋಗಲು ಸಿಎಂ ನಿರಾಕರಣೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಸಿಎಂ ವಾಗ್ದೇವಿ ದೇವಸ್ಥಾನಕ್ಕೆ ಹೋಗಿದ್ದಾರೆ. ನಾನೇ ಅವರನ್ನು ಕರೆದುಕೊಂಡು ಹೋಗಿದ್ದೇನೆ. ನಮಸ್ಕಾರ ಮಾಡಿಯೇ ಅವರು ಹೊರಬಂದಿದ್ದಾರೆ. ಬಿಜೆಪಿಯವರು ಸುಮ್ಮನೆ ವಿವಾದ ಮಾಡುತ್ತಿದ್ದಾರೆ, ಅವರಿಗೆ ಮಾಡೋಕೆ ಕೆಲಸವಿಲ್ಲ'' ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮೂವರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, ''ಅದನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಟಿವಿ ಮುಂದೆ ಬಂದು ಮೂರು ಡಿಸಿಎಂ ಆಗಬೇಕು ಅಂದರೂ, ಹೈ ಕಮಾಂಡ್ ಮಾಡಿಲ್ಲ ಅಂದರೆ ಮಾಡಲಾಗುವುದಿಲ್ಲ. ಒಂದು ವೇಳೆ ಹೈ ಕಮಾಂಡ್ ಮಾಡಬೇಕು ಅಂದರೆ ಮಾಡಬೇಡಿ ಅನ್ನೋದಕ್ಕೆ ಆಗಲ್ಲ. ಸಿಎಂ, ಡಿಸಿಎಂ ಅದರ ಬಗ್ಗೆ ತೀರ್ಮಾನಿಸಬೇಕು. ಬೇಕೋ ಬೇಡ್ವೋ ಅವರು ಹೇಳಬೇಕು'' ಎಂದರು.