ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಣಮುಖರಾಗಿದ್ದು, ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜು.19ರಂದು ವಿಧಾನಸಭೆಯಲ್ಲಿ ಅಸಭ್ಯ ವರ್ತನೆಗಾಗಿ ಬಿಜೆಪಿಯ 10 ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅಮಾನತು ಗೊಳಿಸಿದ್ದರು. ಈ ವೇಳೆ ಸ್ಪೀಕರ್ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಅಮಾನತುಗೊಂಡ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕಲು ಮಾರ್ಷಲ್‌ಗಳು ಪ್ರಯತ್ನಿಸಿದ್ದರು. ಅಮಾನತುಗೊಂಡ ಶಾಸಕರ ಇತರೆ ಬಿಜೆಪಿ ಶಾಸಕರು ರಕ್ಷಣೆ ನೀಡುತ್ತಿದ್ದರು. ಈ ವೇಳೆ ಸದನದಲ್ಲಿ ಗಾಲಾಟೆ ಉಂಟಾಗಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಪಿ ಮತ್ತು ಮಧುಮೇಹ ವ್ಯತ್ಯಾಸದಿಂದಾಗಿ ಕುಸಿದುಬಿದ್ದಿದ್ದರು. ಕೂಡಲೇ ಆಂಬುಲೆನ್ಸ್ ಮೂಲಕ ಶಾಸಕರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಾ.ಅಬ್ದುಲ್ ಖಾದಿರ್ ಅವರು ಯತ್ನಾಳ್ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದು, ಬಿಪಿ, ಶುಗರ್ ಏರುಪೇರಾದ ಹಿನ್ನೆಲೆಯಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಇದನ್ನು ಹೊರತುಪಡಿಸಿದರೆ ಆರೋಗ್ಯ ಸರಿ ಇದೆ. ಒಂದು ದಿನ ನಿಗಾದಲ್ಲಿರಿಸಿ ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಗುರುವಾರ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗಿತ್ತು.