ದೇವೇಗೌಡರ ನಿವಾಸಕ್ಕೆ ವಿ.ಸೋಮಣ್ಣ ಭೇಟಿ: 'ದಳ'ಪತಿಗಳ ಜೊತೆ ಮಾತುಕತೆ ಬೆಂಗಳೂರು:ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠ ನಾಯಕರನ್ನು ಬಿಜೆಪಿ ನಾಯಕ ವಿ.ಸೋಮಣ್ಣ ಭೇಟಿಯಾಗಿ ರಾಜಕೀಯ ವಿಚಾರದ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಪಕ್ಷದ ನಡೆಗೆ ಅಸಮಾಧಾನಗೊಂಡಿರುವ ಸೋಮಣ್ಣ, ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದು, ಇದೀಗ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ಜನತಾ ಪರಿವಾರದಲ್ಲೇ ಬೆಳೆದು ವಲಸೆ ಹೋಗಿದ್ದರೂ ಸೋಮಣ್ಣರನ್ನು ಗೌಡರ ಕುಟುಂಬ ಆತ್ಮೀಯವಾಗಿ ನಿವಾಸಕ್ಕೆ ಬರಮಾಡಿಕೊಂಡಿತು. ಈ ಸಂದರ್ಭದಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಸದ್ಯದ ಬಿಜೆಪಿಯಲ್ಲಿನ ವ್ಯವಸ್ಥೆಗೆ ಮುನಿಸಿಕೊಂಡಿರುವ ಸೋಮಣ್ಣ ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ದೆಹಲಿಗೂ ತೆರಳಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದು, ಅದಕ್ಕೂ ಮುನ್ನ ದಳಪತಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ದೇವೇಗೌಡರ ನಿವಾಸಕ್ಕೆ ಸೋಮಣ್ಣ ಭೇಟಿ ಗೌಡರ ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಣ್ಣ, ''ನನಗೆ ರಾಜಕೀಯ ಗೊತ್ತಾಗಿದ್ದೇ ದೇವೇಗೌಡರಿಂದ. ನಾನು ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದಿದ್ದೆ. 1976-77ರಲ್ಲಿ ಗೌಡರ ಭೇಟಿಯಾಯಿತು. ನಂತರ 30 ವರ್ಷಕ್ಕೂ ಹೆಚ್ಚು ಕಾಲ ನಾನು ಅವರ ಶಿಷ್ಯನಾಗಿ ರಾಜಕಾರಣದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗೌಡರ ಪುತ್ರರಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಇಬ್ಬರು ನನಗೆ ಸಹೋದರರಂತಿದ್ದಾರೆ. ನಾನು ಸ್ವಲ್ಪ ಗೊಂದಲಕ್ಕೆ ಸಂದರ್ಭದಲ್ಲಿ ನನ್ನ ನೋವು ಹಂಚಿಕೊಂಡ ಕುಟಂಬವೆಂದರೆ ಅದು ಗೌಡರ ಕುಟುಂಬ. ನನಗೆ ಸಮಾಧಾನ ಮಾಡಿ ಧೈರ್ಯವಾಗಿ ಪರಿಸ್ಥಿತಿ ಎದುರಿಸುವಂತೆ ದೇವೇಗೌಡರು ಸಲಹೆ ನೀಡಿದ್ದರು. ಅವರ ರಾಜಕೀಯ ವೈಖರಿ, ದೂರದೃಷ್ಟಿ, ರಾಷ್ಟ್ರದ ನಿರ್ವಹಣೆ, ರಾಜ್ಯದ ದೊಂಬರಾಟದ ಬಗ್ಗೆ ಅವರು ಒಂದು ಗಂಟೆಯಲ್ಲಿ ಮಾತನಾಡಿದರು. ದೇಶದ ಭವಿಷ್ಯದಲ್ಲಿ ಮೋದಿ ಕಾರ್ಯವೈಖರಿಯನ್ನು ಮಾಜಿ ಪ್ರಧಾನಿಯಾಗಿ ಹೇಳುತ್ತಿರುವುದು ಅವರ ನಿಷ್ಕಲ್ಮಶತೆಗೆ ಕೈಗನ್ನಡಿಯಾಗಿದ್ದ ಅವರ ಮೇಲಿನ ನನ್ನ ನಂಬಿಕೆ ದುಪ್ಪಟ್ಟಾಗಿದೆ'' ಎಂದು ತಿಳಿಸಿದರು.
''ನನ್ನದೇ ಆದ ಕಟ್ಟುಪಾಡಲ್ಲಿ ಬದುಕಿದವನು ನಾನು. ಆದರೆ ಇಂದು ಕಟ್ಟುಪಾಡು ಮೀರಿದ ರಾಜಕಾರಣವಿದೆ ಎನ್ನುವುದು ಗೊತ್ತಾಯಿತು. ನಾವು ಯಾರು ದೊಡ್ಡವರಲ್ಲ. ದೇಶದ ಅಭಿವೃದ್ದಿ ದೊಡ್ಡದು ಎಂದು ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಮೂವರೂ ಮಾತನಾಡಿದ್ದಾರೆ. ಸಂಕ್ರಾಂತಿ ನಂತರ ಎಲ್ಲ ಬದಲಾಗಲಿದೆ. ವಿಧಾನಸಭಾ ಚುನಾವಣೆಯ ಸೋಲು ಮರೆಯುವ ಕೆಲಸ ಆಗಿದೆ'' ಎಂದರು.
ಇದನ್ನೂ ಓದಿ:ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು: ಹೆಚ್.ಡಿ.ದೇವೇಗೌಡ