ಬೆಂಗಳೂರು:ಬಿಬಿಎಂಪಿ ಮಾಜಿ ಸದಸ್ಯ ಡಿ ಉಮಾಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆದರು. ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಉಮಾಶಂಕರ್ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಯಾದರು. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಶಾಸಕ ಕೃಷ್ಣಪ್ಪ, ಮಾಜಿ ಶಾಸಕ ಪ್ರಿಯಾ ಕೃಷ್ಣ ಹಾಜರಿದ್ದರು.
ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತದ ಮೂಲಕ ಕಾರ್ಯಕ್ರಮ ಆರಂಭವಾಯಿತು. ತೆರದ ವಾಹನದಲ್ಲಿ ಸಿದ್ದರಾಮಯ್ಯ ಮೆರವಣಿಗೆ ಮಾಡುವ ಜೊತೆಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕಳಶ ಹೊತ್ತು ಸಿದ್ದರಾಮಯ್ಯ ಸ್ವಾಗತಿಸಿದ ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಸಮಾರಂಭಕ್ಕೆ ವಿಶೇಷ ಕಳೆ ತಂದುಕೊಟ್ಟರು. ಇನ್ನೊಂದೆಡೆ ಕಾರ್ಯಕರ್ತರು ಸಿದ್ದರಾಮಯ್ಯಗೆ ನವಿಲು ಗರಿಯ ಹಾರ ಹಾಕಿ, ಕಂಬಳಿ ನೀಡಿದರು.
ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸೋಮಣ್ಣ ಹೆಸರು ಯಾಕಪ್ಪ ಹೇಳ್ತಿರಾ? ಸುಳ್ಳುಗಾರ ಸೋಮಣ್ಣ. ಸೋಮಣ್ಣ ಬಗ್ಗೆ ಚರ್ಚೆ ಮಾಡದಿರೋದೇ ಒಳ್ಳೆಯದು. ಬಡವರಿಗೆ ಮನೆ ಕಟ್ಟಿಸಿಕೊಡಲು ಆಗ್ತಿಲ್ಲ, ಆದರೆ ಸೋಮಣ್ಣ ಎರಡು ಮನೆ ಕಟ್ಟಿಸಿಕೊಳ್ತಿದ್ದಾರೆ. ಸೋಮಣ್ಣ ಬರೀ ಸುಳ್ಳೆ ಹೇಳೋದು ಎಂದು ಲೇವಡಿ ಮಾಡಿದರು.
ಎಲ್ಲಕ್ಕೂ ಟ್ಯಾಕ್ಸ್ ಹಾಕಿದ್ದಾರೆ. ಇವರ ಮನೆ ಹಾಳಾಗ, ಇನ್ನು ಯಾವುದನ್ನ ಬಿಡ್ತಾರೆ, ಕೊರೊನಾ ಸಂದರ್ಭದಲ್ಲಿ ವೆಂಟಿಲೇಟರ್ ಸೇರಿದಂತೆ ಎಲ್ಲದರಲ್ಲೂ ಲೂಟಿ ಮಾಡಿದ್ರು ಸುಧಾಕರ್. ಎಲ್ಲಾ ನಿಮಗೆ ಗೊತ್ತು. ಪ್ರಿಯಾಕೃಷ್ಣ , ಕೃಷ್ಣಪ್ಪ ಗೆದ್ರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಉದ್ಯೋಗ ಕೇಳಿದ್ರೆ ಪಕೋಡ ಮಾಡಿ ಅಂದ್ರು. ಪಕೋಡ ಮಾರಲು ಎಣ್ಣೆ ಬೆಲೆ ಕೂಡ ಏರಿಕೆ ಆಗಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ ಎಲ್ಲಾ ಜಾತಿಯ ಬಡವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡ್ತೇವೆ. ಕೊಟ್ಟ ಮಾತಿನಂತೆ ನಡೆದುಕೊಳ್ತೇವೆ. ಮತ್ತೆ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
(ಇದನ್ನೂ ಓದಿ: ಮುನಿಯಪ್ಪ ಟ್ರಬಲ್ಗೆ ಟ್ರಬಲ್ ಕೊಡುವಂತ ನಾಯಕ: ಸುರ್ಜೇವಾಲಾ)