ಕರ್ನಾಟಕ

karnataka

ETV Bharat / state

ಸಂಕ್ರಾಂತಿಗೆ ಕಟೀಲ್ ಅವಧಿ ಮುಕ್ತಾಯ: 6 ತಿಂಗಳು ವಿಸ್ತರಣೆಗೆ ಹೈಕಮಾಂಡ್ ನಿರ್ಧಾರ? - ಈಟಿವಿ ಭಾರತ್​ ಕನ್ನಡ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ಇದೀಗ 2 ವರ್ಷ 11 ತಿಂಗಳು ಮುಗಿಸಿದ್ದು, 2023ರ ಜ.15 ರಂದು ಈ ಅವಧಿ ಮುಕ್ತಾಯವಾಗಲಿದೆ.

ಸಂಕ್ರಾಂತಿಗೆ ಕಟೀಲ್ ಅವಧಿ ಮುಕ್ತಾಯ: ಆರು ತಿಂಗಳ ಕಾಲ ಅಧಿಕಾರಾವಧಿ ವಿಸ್ತರಣೆಗೆ ಹೈಕಮಾಂಡ್ ನಿರ್ಧಾರ..?
bjp-leader-thinking-to-extend-bjp-state-president-nalin-kumar-kateel-time

By

Published : Dec 8, 2022, 4:40 PM IST

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನಂತರ ಪಕ್ಷದ ಸಾರಥ್ಯ ವಹಿಸಿಕೊಂಡಿರುವ ಸಂಸದ ನಳಿನ್ ಕುಮಾರ್ ಅಧಿಕಾರವಧಿ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ. ಮೂರು ವರ್ಷಗಳ ಅವಧಿ ಮುಗಿಸುತ್ತಿರುವ ಕಟೀಲ್ ಜಾಗಕ್ಕೆ ಮತ್ತೊಬ್ಬರ ನೇಮಕ ಮಾಡುವ ಚಿಂತನೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ. ರಾಜ್ಯದ ವಿಧಾನಸಭೆ ಚುನಾವಣೆವರೆಗೂ ಕಟೀಲ್ ಅವರನ್ನೇ ಮುಂದುವರೆಸಿ, ನಂತರ ಹೊಸಬರಿಗೆ ಅವಕಾಶ ಕಲ್ಪಿಸುವ ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಕಟೀಲ್​ ಮುಂದುವರಿಕೆಗೆ ಚಿಂತನೆ: ಕಳೆದ 2 ವರ್ಷ 11 ತಿಂಗಳು ಕಾಲ ಪಕ್ಷದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಕಟೀಲ್ ಜಾಗಕ್ಕೆ ಇನ್ನೊಂದು ತಿಂಗಳಿನಲ್ಲಿ ಚುನಾವಣೆ ನಡೆಸಿ ಹೊಸಬರ ನೇಮಕಕ್ಕೆ ಅವಕಾಶ ಕಲ್ಪಿಸಬೇಕಿದೆ. ಆದರೆ, ಈ ಪ್ರಕ್ರಿಯೆಗೆ ಬಿಜೆಪಿ ಹೈಕಮಾಂಡ್ ತಾತ್ಕಾಲಿಕ ತಡೆ ನೀಡಿದೆ. ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ಸದ್ಯಕ್ಕೆ ನಡೆಸದೇ ಹಂಗಾಮಿಯಾಗಿ ಕಟೀಲ್ ಅವರನ್ನೇ ಮುಂದುವರೆಸಲು ನಿರ್ಧರಿಸಿದೆ. ಪಕ್ಷದ ಸಂವಿಧಾನದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಅಥವಾ ಅವಿರೋಧ ಆಯ್ಕೆ ಮಾಡಬೇಕು. ಆದರೆ ಈಗ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದಲ್ಲಿ ಮೂರ್ನಾಲ್ಕು ತಿಂಗಳಿನಲ್ಲೇ ಎದುರಾಗಲಿರುವ ಚುನಾವಣೆಯಲ್ಲಿ ಸಂಘಟನಾತ್ಮಕ ಚುಟುವಟಿಕೆಯಲ್ಲಿ ಸಮನ್ವಯತೆ ಕೊರತೆ ಎದುರಾಗಲಿದೆ. ಇದು ಪಕ್ಷದ ಚುನಾವಣಾ ರಣತಂತ್ರದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಸದ್ಯಕ್ಕೆ ಕಟೀಲ್ ಬದಲಾವಣೆ ಮಾಡದೇ ಅವರನ್ನೇ ಆರು ತಿಂಗಳು ಮುಂದುವರೆಸುವ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜನವರಿಗೆ ಅಧಿಕಾರಾವಧಿ ಮುಕ್ತಾಯ: ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಪಕ್ಷದ ನಿಯಮದಂತೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ, 2019ರ ಆ.27ರಂದು ಸಂಸದ ನಳಿನ್ ಕುಮಾರ್ ಕಟೀಲ್ ಹಂಗಾಮಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. 2020ರ ಜ.16ರಂದು ಮಲ್ಲೇಶ್ವರಂಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು .ಚುನಾವಣೆಗೆ ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಲಾಗಿತ್ತು. ಪೂರ್ಣ ಪ್ರಮಾಣದ ರಾಜ್ಯಾಧ್ಯಕ್ಷರಾಗಿ ಅಂದು ಅಧಿಕಾರ ಸ್ವೀಕಾರ ಮಾಡಿದ್ದ ಕಟೀಲ್ ಇದೀಗ 2 ವರ್ಷ 11 ತಿಂಗಳು ಮುಗಿಸಿದ್ದು, 2023ರ ಜ.15 ರಂದು ಕಟೀಲ್ ಅವಧಿ ಮುಕ್ತಾಯವಾಗಲಿದೆ.

ಇರುವ ತಂಡ ಬಲಿಷ್ಠಗೊಳಿಸಲು ಚಿಂತನೆ: ಒಂದು ವೇಳೆ ಈಗ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದಲ್ಲಿ ಪದಾಧಿಕಾರಿಗಳ ತಂಡವನ್ನೂ ಬದಲಿಸಬೇಕಾಗಲಿದೆ. ಜಿಲ್ಲಾ ಘಟಕಗಳನ್ನೂ ಪುನರ್ ನೇಮಕ ಮಾಡಬೇಕಾಗಲಿದೆ. ಸಹಜವಾಗಿಯೇ ಹೊಸ ಅಧ್ಯಕ್ಷರ ಬಂದ ನಂತರ ಹೊಸ ತಂಡವನ್ನು ಕಟ್ಟಬೇಕಾಗಲಿದೆ. ಹಳೆಯ ತಂಡವನ್ನು ಮುನ್ನಡೆಸುವುದು ಹೊಸ ಅಧ್ಯಕ್ಷರಿಗೆ ಸವಾಲಿನ ಕೆಲಸ ಹಾಗಾಗಿ ಚುನಾವಣಾ ಹೊಸ್ತಿಲಲ್ಲಿ ಹೊಸ ತಂಡ ರಚಿಸಿ ಅಖಾಡಕ್ಕಿಳಿಯುವ ದುಸ್ಸಾಹಸದ ಬದಲು ಇರುವ ತಂಡವನ್ನೇ ಬಲಿಷ್ಠಗೊಳಿಸಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ. ಈ ಕುರಿತ ಸಂದೇಶವನ್ನೂ ರಾಜ್ಯ ಘಟಕಕ್ಕೆ ರವಾನಿಸಿದ್ದಾರೆ.

ಬಿಎಸ್​ವೈ ಜೊತೆ ಕಟೀಲ್​ ಸಮಾಲೋಚನೆ: ಈಗಾಗಲೇ ಹೈಕಮಾಂಡ್‌ನಿಂದ ಕಟೀಲ್ ಅವಧಿ ವಿಸ್ತರಣೆ ಕುರಿತು ರಾಜ್ಯ ಘಟಕಕ್ಕೆ ಮಾಹಿತಿ ಬಂದಿದ್ದು, ಚುನಾವಣೆವರೆಗೂ ಮುಂದುವರೆಯಲು ಕಟೀಲ್ ಗೆ ಸೂಚನೆ ನೀಡಲಾಗಿದೆ ಹೈಕಮಾಂಡ್‌ನಿಂದ ಈ ಸಂದೇಶ ಬರುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ಹಾಗು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಕಟೀಲ್ ದೌಡಾಯಿಸಿದ್ದರು. ಕಳೆದ ವಾರ ಭೇಟಿ ನೀಡಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿ ಹೈಕಮಾಂಡ್ ಕಳುಹಿಸಿದ್ದ ಸಂದೇಶದ ಬಗ್ಗೆ ಸಮಾಲೋಚನೆ ನಡೆಸಿದ್ದರು ಎಂದು ಕಟೀಲ್ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಕಟೀಲ್​ ಸ್ಥಾನ ಅಭಾದಿತ: ರಾಜ್ಯದಲ್ಲಿ ಸಂಘಟನಾತ್ಮಕ ಚಟುವಟಿಕೆ ಮುಂದುವರೆಸಬೇಕು, ಆಂತರಿಕ ಚುನಾವಣಾ ಚಟುವಟಿಕೆಯನ್ನು ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಮುಂದೂಡಿಕೆ ಮಾಡಬೇಕು ಎನ್ನುವ ಸ್ಪಷ್ಟ ಸಂದೇಶದ ಹಿನ್ನೆಲೆಯಲ್ಲಿ ಕಟೀಲ್ ರಾಜ್ಯ ಪ್ರವಾಸದಲ್ಲಿ ಸಕ್ರಿಯರಾಗಿದ್ದಾರೆ. ಜನ ಸಂಕಲ್ಪ ಯಾತ್ರೆಯಲ್ಲಿ ನಿರತರಾಗಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಚುನಾವಣಾ ದೃಷ್ಟಿಯಿಂದ ಸಂಘ ಪರಿವಾರ ಒಪ್ಪುವ, ಖಡಕ್ ಹಿಂದುತ್ವವಾದಿಯನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ವಿಧಾನಸಭೆ ಚುನಾವಣೆವರೆಗೂ ರಾಜ್ಯಾಧ್ಯಕ್ಷರ ಬದಲಾವಣೆಯನ್ನು ಹೈಕಮಾಂಡ್ ಮುಂದೂಡಿಕೆ ಮಾಡಿದ್ದು, ಚುನಾವಣೆ ನಂತರ ಹೊಸ ರಾಜ್ಯಾಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಬಹುದು. ಆದರೆ ಸದ್ಯಕ್ಕೆ ಕಟೀಲ್ ಸ್ಥಾನ ಅಭಾದಿತವಾಗಿದೆ.

ಇದನ್ನೂ ಓದಿ: 75 ವರ್ಷ ದಾಟಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿ: ಅಶ್ವತ್ಥನಾರಾಯಣ

ABOUT THE AUTHOR

...view details