ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನುವ ಆಡಿಯೋ ವೈರಲ್ ಹೊಸ ಸಂಚಲನ ಸೃಷ್ಟಿಸಿದ್ದು, ಕಟೀಲ್ ಜೊತೆ ಮಾತನಾಡಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೆ ಆಡಿಯೋದಲ್ಲಿ ಇನ್ನುಳಿದ ಧ್ವನಿಯಲ್ಲಿ ಏನಿದೆ? ಯಾರು ವೈರಲ್ ಮಾಡಿದ್ದಾರೆ ಎನ್ನುವ ಚರ್ಚೆ ಆರಂಭಗೊಂಡಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಕಟೀಲ್ ಪರ ನಿಂತಿದ್ದು ಸಂಪೂರ್ಣ ಬೆಂಬಲ ನೀಡಿದ್ದಾರೆ.
ಕಳೆದ ರಾತ್ರಿಯಿಂದ ವೈರಲ್ ಆಗುತ್ತಿರುವ ಕಟೀಲ್ ಅವರದ್ದು ಎನ್ನಲಾದ ಆಡಿಯೋ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೆಜ್ಜೆ ಇರಿಸಲಾಗಿದೆ ಎನ್ನುವ ಸುಳಿವು ನೀಡುವ ಪ್ರಯತ್ನ ನಡೆದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಈ ಆಡಿಯೋ ಬಗ್ಗೆ ಕಟೀಲ್ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ್, ಸಚಿವರಾದ ಈಶ್ವರಪ್ಪ, ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸೇರಿ ಬಿಜೆಪಿ ನಾಯಕರು ಕಟೀಲ್ ಸಮರ್ಥನೆಗೆ ನಿಂತಿದ್ದಾರೆ. ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಆಡಿಯೋ ಕೇವಲ 42 ಸೆಕೆಂಡ್ ಇದ್ದು ಉಳಿದದ್ದು ಎಲ್ಲಿ ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೆ ಯಾರ ಜೊತೆ ಮಾತನಾಡಿದ್ದು, ಇದರಲ್ಲಿ ಕೇವಲ ಕಟೀಲ್ ಅವರದ್ದು ಎನ್ನಲಾದ ಧ್ವನಿ ಮಾತ್ರ ಇದೆ. ಎದುರು ಇದ್ದ ಅಥವಾ ಇನ್ನೊಂದು ಬದಿಯಿಂದ ಮಾತನಾಡಿದ ಧ್ವನಿ ಏಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿರಬಹುದು ಎಂದು ಕಟೀಲ್ ಪರ ಬಿಜೆಪಿ ನಾಯಕರು ವಕಾಲತ್ತು ವಹಿಸಿದ್ದಾರೆ.
ಇದನ್ನು ಓದಿ:ಸಿಎಂ ಸ್ಥಾನ ಬದಲಾವಣೆ ಮಾಡಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ: ರಂಭಾಪುರಿ ಶ್ರೀ