ಬೆಂಗಳೂರು:ಕಾನೂನು ಬಾಹಿರವಾಗಿ ಹಲಾಲ್ ಪ್ರಮಾಣಪತ್ರ ನೀಡುತ್ತಿದ್ದು, ಇದನ್ನು ತಡೆಯಲು ಹಲಾಲ್ ವಿಚಾರವಾಗಿ ಖಾಸಗಿ ಬಿಲ್ ಮಂಡಿಸಲು ಸಭಾಪತಿಗೆ ಪತ್ರ ಬರೆದಿದ್ದೇನೆ. ಸಭಾಪತಿ ಅವಕಾಶ ನೀಡಿದರೆ ನಾನು ಅಧಿವೇಶನದಲ್ಲಿ ಖಾಸಗಿ ಬಿಲ್ ಮಂಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲಾಲ್ ಮುದ್ರೆ ಹಾಕುವ ಪದ್ದತಿ ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆ, ಅನೇಕ ಖಾದ್ಯ, ಬೇರೆ ಬೇರೆ ಕಡೆಗಳಲ್ಲೂ ಹಲಾಲ್ ಮುದ್ರೆ ಇದೆ. ಪ್ರಮಾಣಪತ್ರ ಕೊಡಲು ಇವರು ಯಾರು ಎಂದು ಪ್ರಶ್ನಿಸಿದರು.
ಹಲಾಲ್ ವಿರುದ್ಧ ಖಾಸಗಿ ಬಿಲ್ ಮಂಡನೆ : ಇವರು ಸರ್ಟಿಫಿಕೇಟ್ ನೀಡಿದರೆ ಫುಡ್ ಡಿಪಾರ್ಟ್ಮೆಂಟ್ನ ಕೆಲಸ ಏನು?. ಫುಡ್ ಸರ್ಟಿಫಿಕೇಟ್ ನೀಡುವುದು ಫುಡ್ ಡಿಪಾರ್ಟ್‌ಮೆಂಟ್ ಆದರೆ, ಹಲಾಲ್ ಸರ್ಟಿಫಿಕೇಟ್ ನೀಡಲು ಮುಂದಾದರೆ ಆಹಾರ ಇಲಾಖೆ ಕೆಲಸ ಏನು?. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸರಿಸುಮಾರು ಐದು ಸಾವಿರ ಕೋಟಿ ನಷ್ಟ ಆಗುತ್ತಿದೆ. ನಾನು ಅನೇಕ ಕಾನೂನು ತಜ್ಞರು, ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ. ಹಲಾಲ್ ಸರ್ಟಿಫಿಕೇಟ್ ನೀಡುವ ಸಂಸ್ಥೆ ಕಾನೂನು ವಿರೋಧಿಯಾಗಿದ್ದು, ಇದನ್ನು ಸಂಸದರ ಗಮನಕ್ಕೂ ತರುತ್ತೇನೆ ಎಂದರು.
ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ: ಹಲಾಲ್ಗೆ ಮುಖ್ಯ ಅಥಾರಿಟಿ ಏನು? ಹಲಾಲ್ ಸಂಸ್ಥೆಯ ವ್ಯಾಪ್ತಿ ಎಷ್ಟು? ಕಿರಾಣಿ ಅಂಗಡಿ ಪದಾರ್ಥಗಳ ಮೇಲೆ ಹಲಾಲ್ ಪ್ರಮಾಣಪತ್ರ ನೀಡುತ್ತಾರೆ. ಆಸ್ಪತ್ರೆಗೂ ಹಲಾಲ್ ಪ್ರಮಾಣಪತ್ರ ನೀಡುತ್ತಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಆಗ್ತಾ ಇದೆ. ತೆರಿಗೆ ಮೂಲಕ ಬರಬೇಕಾದ ಹಣ ತಪ್ಪಿ ಹೋಗುತ್ತಿದೆ ಎಂದು ಮಾಹಿತಿ ನೀಡಿದರು.
ಹಲಾಲ್ ಪ್ರಮಾಣ ಪತ್ರಗಳನ್ನು ನೀಡುವ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು ಎಂದು ನೋಂದಣಿ ಆಗಿವೆ. ಧಾರ್ಮಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಇರುವುದಿಲ್ಲ. ಈ ಧಾರ್ಮಿಕ ಸಂಸ್ಥೆಗಳು ಪ್ರಮಾಣ ಪತ್ರ ನೀಡುವ ಕುರಿತು ಸರಕಾರದಿಂದ ಯಾವುದೇ ರೀತಿಯ ಅನುಮತಿ ಪಡೆದಿರುವುದಿಲ್ಲ.