ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯನ್ನು ಬಿಜೆಪಿ ಸ್ವಾಗತಿಸುತ್ತದೆ. ಈ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಪಂಚ ಗ್ಯಾರಂಟಿಗಳಿಗೆ ಸೀಮಿತವಾಗದೇ ಉಳಿದ ಕಾರ್ಯಕ್ರಮಗಳತ್ತವೂ ಸರ್ಕಾರ ಗಮನ ಹರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯನ್ನು ಮೈಸೂರಿನಲ್ಲಿ ಆರಂಭಿಸಿದ್ದಾರೆ. ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಹಾಗಾಗಿ ಯೋಜನೆಯನ್ನು ಸ್ವಾಗತಿಸುತ್ತೇವೆ. ಆದರೆ, ಸರ್ಕಾರ ಎಲ್ಲ ಮಹಿಳೆಯರಿಗೂ 2 ಸಾವಿರ ರೂ ಹಾಕುತ್ತೇವೆ ಎಂದಿತ್ತು. ಈಗ ಮಾತಿಗೆ ತಪ್ಪಿ ಮನೆಯ ಯಜಮಾನಿಗೆ ಮಾತ್ರ ಹಾಕುತ್ತೇವೆ ಎಂದಿದ್ದಾರೆ. ಹಾಗಾಗಿ, ಬಹಳಷ್ಟು ಮಹಿಳೆಯರಿಗೆ ಯೋಜನೆಯ ಬಗ್ಗೆ ಅಸಮಾಧಾನವಿದೆ ಎಂದರು.
ಸರ್ಕಾರ ನೂರು ದಿನಗಳ ಸಂಭ್ರಮವನ್ನು ಆಚರಿಸುತ್ತಿದೆ. ಆದರೆ, ನೂರಾರು ಸಮಸ್ಯೆಗಳು ಜೊತೆ ಜೊತೆಗಿವೆ. ಸಂಭ್ರಮ ಕೇವಲ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಅವರಿಗೆ ಮಾತ್ರ ಇದೆ. ರಾಜ್ಯದ 6 ಕೋಟಿ ಜನರಿಗೆ ಸಂಭ್ರಮವಿಲ್ಲ.
ರಾಜ್ಯಕ್ಕೆ ಬರಗಾಲ ಬರುತ್ತಿದೆ, ಮಳೆಯಿಲ್ಲ. ಕುಡಿಯುವ ನೀರಿನ ಹಾಹಾಕಾರ ಶುರುವಾಗುತ್ತಿದೆ. ಗ್ಯಾರಂಟಿ ಹೊಂದಾಣಿಕೆಗೆ ತೆರಿಗೆ ಹೆಚ್ಚಿಸಿದ್ದಾರೆ. ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿ ರೂಗೂ ಅಧಿಕ ಮೊತ್ತವನ್ನು ಬೇರೆ ಇಲಾಖೆಗೆ ವರ್ಗಾಯಿಸಿ ಅಭಿವೃದ್ಧಿ ಕಾರ್ಯಕ್ಕೆ ಬಳಸುತ್ತಿದ್ದಾರೆ. ಇದರಿಂದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಾಕಷ್ಟು ಅಸಮಾಧಾನ ಉಂಟಾಗಿದೆ. ಶಾಸಕರಿಗೆ ಅನುದಾನ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.