ಬೆಂಗಳೂರು : ಬಿಜೆಪಿ ಮುಖಂಡ ಮುನಿರಾಜು ಮನೆ ಮೇಲೆ ಚುನಾವಣಾ ಫ್ಲೈಯಿಂಗ್ ಸ್ವ್ಕಾಡ್ ಮತ್ತು ಜಿಎಸ್ಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ಬಂದ ದೂರಿನ ಮೇರೆಗೆ ಅಗ್ರಹಾರ ಬಡಾವಣೆಯ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 2,500 ಸೀರೆಗಳು ಪತ್ತೆಯಾಗಿವೆ. ಹೀಗಾಗಿ ಇವುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿರುವ ಮುನಿರಾಜು, ನಮಗೆ ಎಸ್ಎಲ್ವಿ ಎಂಟರ್ ಪ್ರೈಸಸ್ ಎಂಬ ರಿಜಿಸ್ಟರ್ ಉದ್ಯಮವಿದೆ. ಇದಕ್ಕೆ ಜಿಎಸ್ಟಿ ಕೂಡ ಇದೆ. ನಾವು ಸೀರೆ ತಂದು ಮಾರಾಟ ಮಾಡುತ್ತೇವೆ. ಇದು ಯಾವುದೂ ಚುನಾವಣಾ ಉದ್ದೇಶಕ್ಕೆ ತಂದಿರುವುದಲ್ಲ. ಸೀರೆ ಖರೀದಿಗೆ ಸಂಬಂಧಿಸಿದಂತೆ ನಮ್ಮ ಬಳಿ ಜಿಎಸ್ಟಿ ಬಿಲ್ ಇದೆ. ಇದು ನಾವು ಮೊದಲಿನಿಂದಲೂ ನಡೆಸಿಕೊಂಡು ಬಂದಿರುವ ಉದ್ಯಮ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುನಿರಾಜು ನೀಡಿರುವ ಎಲ್ಲಾ ಜಿಎಸ್ಟಿ ಬಿಲ್ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ವೇಳೆ ಇವರ ಮನೆಯಲ್ಲಿ ವೋಟರ್ ಐಡಿಗೆ ಸಂಬಂಧಿಸಿದ ಕೆಲವು ಫಾರ್ಮ್ಗಳು ಪತ್ತೆಯಾಗಿವೆ. ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆ ಮಾಡುವ 1,200 ಫಾರ್ಮ್ ಸಿಕ್ಕಿದೆ. ಈ ಬಗ್ಗೆ ವೋಟರ್ ಐಡಿ ಇಲ್ಲದೆ ಇರುವವರಿಗೆ ವೋಟರ್ ಐಡಿ ಮಾಡಲು ಸಹಾಯ ಮಾಡುತ್ತಿದ್ದೇವೆ. ಯಾರಾದರೂ ವೋಟರ್ ಐಡಿ ಬೇಕು ಎಂದು ಬಂದರೆ ಈ ಫಾರ್ಮ್ ಗೆ ಅವರ ಪೊಟೋ ಅಂಟಿಸಿ ಕೊಡುತ್ತಿದ್ದೆವು. ಇದನ್ನು ಮಾಡುವುದು ಕಾನೂನು ಬಾಹಿರ ಅಲ್ಲ. ವೋಟರ್ ಫಾರ್ಮ್ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವ ಕಂಡು ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.