ಬೆಂಗಳೂರು:ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಸಿಂಗ್ ಚಾಹಲ್ ಹೇಳಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳ ಕ್ರಮವು ಎಲ್ಲ ರೈತ ಸಮುದಾಯ, ಒಬಿಸಿ ಸಮುದಾಯಕ್ಕೆ ಬೇಸರ ತಂದಿದೆ. ನಾನೂ ಒಬಿಸಿ ಸಮುದಾಯಕ್ಕೆ ಸೇರಿದವನು. ಸಂಸದರು ತಮ್ಮ ಸ್ಥಾನಕ್ಕೆ ತಕ್ಕುದಾಗಿ ವರ್ತಿಸುತ್ತಿಲ್ಲ ಎಂದು ಹೇಳಿದರು.
ಅಧಿಕಾರ ಕಳಕೊಂಡಾಗ ಅವರು ಹತಾಶರಾಗಿ ವರ್ತಿಸುತ್ತಾರೆ. ರಾಹುಲ್ ಗಾಂಧಿಯವರು ಉಪ ರಾಷ್ಟ್ರಪತಿಗಳ ಅಣಕವನ್ನು ವಿಡಿಯೋ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಂತೆ, ಸಂಸದನಂತೆ ಅವರ ವರ್ತನೆ ಇಲ್ಲ ಎಂದು ಟೀಕಿಸಿದರು.
ರೈತ ಸಮುದಾಯ ಮತ್ತು ಒಬಿಸಿ ಸಮುದಾಯದ ನಾಯಕ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಹೀಗೆ ಸದನದ ಒಳಗೆ ಮತ್ತು ಹೊರಗೆ ಅವಮಾನಿಸುವುದು ಸರಿಯಲ್ಲ. ವಿಪಕ್ಷಗಳ ಈ ವರ್ತನೆ ಶೋಭೆ ತರುವಂತಿಲ್ಲ. ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ದೆಹಲಿಯಲ್ಲಿ ಮುಂಗೇರಿಲಾಲ್ ಕಿ ಹಸೀನ್ ಸಪ್ನೇ ಎಂಬ ಮಾತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡುವ ಕನಸು ಕಾಣುವ ಮೊದಲು ಕಾಂಗ್ರೆಸ್ ಪಕ್ಷವು ಸಂಸದರ ಕುರಿತು ಅಗತ್ಯವಾಗಿ ಚಿಂತಿಸಬೇಕಿದೆ. ಕಾಂಗ್ರೆಸ್ ಈಗ ಅತ್ಯಂತ ಕಡಿಮೆ ಸಂಸದರನ್ನು ಹೊಂದಿದೆ. ಇದು ಕೇವಲ ಹಗಲುಗನಸಷ್ಟೇ ಎಂದು ಅವರು ತಿಳಿಸಿದರು.