ಬೆಂಗಳೂರು:ಇವತ್ತು ಪ್ರಥಮ ಬಾರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಡಿಸಿಗಳ ಪ್ರತ್ಯೇಕ ಸಭೆ ಮಾಡ್ತಿದ್ದೇನೆ. ಸಿಇಒ ವ್ಯಾಪ್ತಿಗೆ ಬರುವಂತಹ ಆಡಳಿತ ನಿರ್ವಹಣೆ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತೀನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧಕ್ಕೆ ತೆರಳುವ ಮುನ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎರಡರ ಪ್ರತ್ಯೇಕ ಅಭಿವೃದ್ಧಿ ಸಂಬಂಧಪಟ್ಟಂತೆ ಸೂಚನೆ ಕೊಟ್ಟಿದ್ದೇನೆ. ಯಾವ ಯಾವ ಯೋಜನೆಯಲ್ಲಿ ಎಷ್ಟೆಷ್ಟು ಸಾಧನೆಯಾಗಿದೆ ಎಂಬುದರ ನಿಖರತೆಯ ಅಧಾರದ ಮೇಲೆ ಪರಿಶೀಲನೆ ಆಗಲಿದೆ. ಈ ಬಗ್ಗೆ ಪಟ್ಟಿ ರೆಡಿ ಮಾಡಿಕೊಳ್ಳಲು ಹೇಳಿದ್ದೇನೆ. ನಾಳೆ ಡಿಸಿಗಳ ಸಭೆ ಮಾಡ್ತೀನಿ. ಆಡಳಿತ ನಿರ್ವಹಣೆ ವ್ಯಾಪ್ತಿಯಲ್ಲಿ ಬರುವಂತೆ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದರು.
ಇದೊಂದು ಮಹತ್ವದ ಘಟ್ಟ. ಮುಂದಿನ ಮೂರು ತಿಂಗಳಲ್ಲಿ ಎಷ್ಟರ ಮಟ್ಟಿಗೆ ಮುಟ್ಟುತ್ತೇವೆ, ಮುಂದಿನ ವರ್ಷಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎಂಬ ಬಗ್ಗೆ ಅನುಕೂಲವಾಗಲಿದೆ. ಈಗಿರುವ ಕಾರ್ಯಕ್ರಮಕ್ಕೆ ಚುರುಕು ಹಾಗೂ ಹೊಸ ಕಾರ್ಯಕ್ರಮಗಳ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ. ಬಜೆಟ್ನಲ್ಲಿ ಹೊಸ ಕಾರ್ಯಕ್ರಮ ಸೂಚಿಸಲು ಅನುಕೂಲವಾಗಲಿದೆ ಎಂದರು.
ಬಂದ್ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಕರವೇ ಪ್ರವೀಣ್ ಶೆಟ್ಟಿ ಬಂದು ಭೇಟಿ ಮಾಡಿದ್ದಾರೆ. ಬಂದ್ಗೆ ನಾವು ಕರೆ ಕೊಡೋದಿಲ್ಲ ಎಂದು ಹೇಳಿದ್ದಾರೆ. ಬಂದ್ನಿಂದ ರಾಜ್ಯದ ಜನರಿಗೆ ತೊಂದರೆ ಆಗಲಿದೆ. ನಾನು ನಮ್ಮ ಹಿರಿಯ ಹೋರಾಟಗಾರದ ವಾಟಾಳ್ ನಾಗರಾಜ್ರಿಗೆ ಬಂದ್ ಕೈಬಿಡಿ ಎಂದು ಮನವಿ ಮಾಡ್ತೀನಿ. ಕೊರೊನಾ ಆರ್ಥಿಕ ಹೊಡೆತದಿಂದ ಹಾಗೂ ಜನಸಾಮಾನ್ಯರ ಹಿತದಿಂದ ಬಂದ್ ವಾಪಸ್ ಪಡೆಯುವಂತೆ ಮನವಿ ಮಾಡ್ತೀನಿ ಎಂದು ಹೇಳಿದರು.
ಬಿಜೆಪಿ ನಾಯಕಿ ಖುಷ್ಬೂ ಭೇಟಿ: ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕಿ ಖುಷ್ಬೂ ಸಿಎಂ ಭೇಟಿ ಮಾಡಿ ಚರ್ಚಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಖುಷ್ಬೂ, ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ. ತಮಿಳುನಾಡಿನಲ್ಲೂ ಈ ಒತ್ತಾಯವಿದೆ. ತಮಿಳುನಾಡು ಸರ್ಕಾರದ ನಡೆ ಏನಿರುತ್ತೆ ಅಂತ ನಾವು ಕಾದು ನೋಡ್ತಿದ್ದೇವೆ. ತಮಿಳುನಾಡಿನಲ್ಲೂ ಚುನಾವಣೆ ವೇಳೆ ದೇವಸ್ಥಾನಗಳನ್ನು ಮುಕ್ತಗೊಳಿಸುವ ಭರವಸೆ ಕೊಡಲಾಗಿತ್ತು ಎಂದು ಹೇಳಿದರು.
ಪ್ರಧಾನಿ ನೇತೃತ್ವದ ಪೋಷಣ್ ಅಭಿಯಾನದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಸ್ವಸ್ಥ ಬಾಲಕ್, ಸ್ವಸ್ಥ ಬಾಲಿಕಾ ಸ್ಪರ್ಧೆ ಇದೆ. ಅಪೌಷ್ಟಿಕತೆಯುಳ್ಳ 0-6 ವರ್ಷದ ಮಕ್ಕಳನ್ನು ದೇಶಾದ್ಯಂತ ಪತ್ತೆ ಮಾಡಲಾಗ್ತಿದೆ. ಆಶಾವಾಡಿ, ಅಂಗನವಾಡಿಗಳಲ್ಲಿ ಈ ಮಕ್ಕಳ ನೋಂದಣಿ ಮಾಡುವ ಕಾರ್ಯ ನಡೀತಿದೆ. ಈ ಅಭಿಯಾನವನ್ನು ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳುವ ಬಗ್ಗೆ ಸಿಎಂ ಬೊಮ್ಮಾಯಿ ಜತೆ ಇವತ್ತು ಚರ್ಚೆ ನಡೆಸಿದ್ದೇನೆ ಎಂದು ಬಿಜೆಪಿ ನಾಯಕಿ ತಿಳಿಸಿದರು.