ಬೆಂಗಳೂರು: ತಾಲಿಬಾನಿಗಳಿಗೆ ಮತಾಂಧತೆ ಇದ್ದರೆ, ಕಾಂಗ್ರೆಸ್ಗೆ ಮತದ ಅಂಧತೆ ಇದೆ. ಕಾಂಗ್ರೆಸ್ ಅನ್ನು ಹಿಂದೂಗಳು ನಂಬುವ ಕಾಲ ಮುಗಿದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಕಾರಿದರು.
ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಂಬಿಸಿ ಹಿಂದೂಗಳನ್ನು ಒಡೆದು ಆಳುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಓಟ್ ಬ್ಯಾಂಕ್ ಗಟ್ಟಿಯಾಗಿಟ್ಟುಕೊಳ್ಳಬೇಕು ಅನ್ನುವ ಮತ ಅಂಧತೆ ಅವರಿಗಿದೆ. ಸಿಎಎ ತಂದಾಗ ಕಾಂಗ್ರೆಸ್ ವಿರೋಧ ಮಾಡ್ತು. ನೆಹರು, ಇಂದಿರಾ ಗಾಂಧಿ ಇದ್ದಾಗಲೂ ಅದನ್ನು ತಂದಿದ್ದರು. ಬಿಜೆಪಿ ತಂದಾಗ ವಿರೋಧಿಸಿದರು. ಆರ್ಟಿಕಲ್ 370 ರದ್ದು ವಿಷಯದಲ್ಲೂ ಹೀಗೆ ಮಾಡಿದ್ರು. ಹೊಸ ಶಿಕ್ಷಣ ನೀತಿಯನ್ನೂ ಕೂಡ ಸಾಧಕ-ಬಾಧಕ ಅರ್ಥ ಮಾಡಿಕೊಳ್ಳುವ ಮುಂಚೆಯೇ ವಿರೋಧಿಸಿದರು. ಕಾಲ ಕಾಲಕ್ಕೆ ಬದಲಾವಣೆ ಬೇಕು ಎನ್ನುವ ಮನಸ್ಥಿತಿಯೇ ಕಾಂಗ್ರೆಸ್ಗೆ ಇಲ್ಲ. ಅದಕ್ಕಾಗಿಯೇ ಒಂದು ಕುಟುಂಬಕ್ಕೆ ಅದು ಜೋತು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ಧರ್ಮವನ್ನು ಹಗುರವಾಗಿ ಕಾಣುವುದನ್ನು ನಾವು ಸಹಿಸುವುದಿಲ್ಲ. ಹಿಂದೂ ಧರ್ಮ ಹಗುರವಾಗಿ ಕಂಡರೆ 2018ರ ಫಲಿತಾಂಶದ ಕಡೆ ಒಮ್ಮೆ ಕಣ್ಣು ಹಾಯಿಸಿ. ಕಾಂಗ್ರೆಸ್ ರಾಜಕೀಯ ಲಾಭ ಆಗತ್ತದೆ ಅಂದುಕೊಂಡರೆ ಅದು ತಪ್ಪು. ಯಾವುದೇ ಲಾಭ ಆಗೋದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಲಿ. ಕಾಂಗ್ರೆಸ್ನಲ್ಲಿ ಯಾರು ಸುಪ್ರಿಂ?. ವಿಪಕ್ಷ ನಾಯಕ ಸುಪ್ರೀಮೋ, ಪಾರ್ಟಿ ಅಧ್ಯಕ್ಷ ಸುಪ್ರಿಮೋ. ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸಿದ್ದರಾಮಯ್ಯ ಏ ಅಧ್ಯಕ್ಷ ನನ್ನ ಬಿಟ್ಟು ಮೀಟಿಂಗ್ ಮಾಡಬೇಡ ಅಂತಾರೆ. ಪಾರ್ಟಿ ಅಧ್ಯಕ್ಷರಿಗೆ ಒಂದು ಮೀಟಿಂಗ್ ಮಾಡುವ ಅವಕಾಶವೂ ಇಲ್ವಾ? ಎಂದು ಕುಟುಕಿದರು.
ಡಿಕೆಶಿನೇ ಶಾಪಗ್ರಸ್ತ:
ದೇವಾಲಯಗಳನ್ನು ಬ್ರಿಟಿಷರು ದೇವರ ಮೇಲಿನ ಪ್ರೀತಿಯಿಂದ ನಿಯಂತ್ರಣಕ್ಕೆ ತರಲಿಲ್ಲ. ದೇವಾಲಯದ ಆದಾಯದ ಮೇಲೆ ಕಣ್ಣಿಟ್ಟು ಸರ್ಕಾರದ ಹಿಡಿತಕ್ಕೆ ತೆಗೆದುಕೊಂಡರು. ದೇವಸ್ಥಾನಗಳ ಹಿಡಿತ ಸ್ವಾತಂತ್ರ್ಯ ನೈಜ ಅರ್ಥಕ್ಕೆ ಸೂಕ್ತವಲ್ಲ. ಕಾಂಗ್ರೆಸ್ ಅಧ್ಯಕ್ಷರು ಉಗ್ರ ವೀರಾವೇಶದಲ್ಲಿ ಭಸ್ಮ ಆಗೋಗ್ತೀರಿ ಅಂತ ಟೀಕಿಸಿದರು. ಅವರೇನಾದ್ರೂ ಅವರನ್ನು ಭಸ್ಮಾಸುರ ಅಂದುಕೊಂಡಿದ್ರೆ ಅವರ ಕೈಯ್ಯನ್ನು ಅವರ ತಲೆ ಮೇಲೆ ಇಡೋದು ಗೊತ್ತು. ಡಿಕೆಶಿನೇ ಶಾಪ ಗ್ರಸ್ತ, ಬೇಲ್ ಮೇಲೆ ಹೊರಗಿದ್ದಾರೆ. ಇಡಿ, ಸಿಬಿಐ ಸ್ವಲ್ಪ ಗಟ್ಟಿಯಾದ್ರೂ ಅವರು ಒಳಗೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮತಾಂತರದ ಪರವಾಗಿದೆಯಾ, ತಾಕತ್ತಿದ್ರೆ ಹೇಳಲಿ ಹಾಗಂತ. ನಾವು ಆಸೆ ಆಮಿಷದ ಮತಾಂತರ ಪರ ಅಂತ ಕಾಂಗ್ರೆಸ್ ಸ್ಪಷ್ಟಪಡಿಸಲಿ. ಸೆಕ್ಯುಲರ್ ಹೆಸರಿನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುವುದನ್ನು ನಾವು ಸಹಿಸೋದಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು. ಬದಲಾಗಿರುವ ಕಾಂಗ್ರೆಸ್, ಗಾಂಧಿ ಹಿಂದುತ್ವ ಬಿಟ್ಟು ಸೋನಿಯಾ ಗಾಂಧಿ ಕಾಂಗ್ರೆಸ್ ಆಗಿದೆ ಎಂದು ಕಿಡಿ ಕಾರಿದರು.
ಪಾದಯಾತ್ರೆ ಗದ್ದುಗೆಯ ಗುದ್ದಾಟದ ಪೈಪೋಟಿ:
ಮೇಕೆದಾಟು ಪಾದಯಾತ್ರೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ಕೊಟ್ಟಾಗಿದೆ. ಪರಿಸರ ಕ್ಲಿಯರೆನ್ಸ್ ಆಗಬೇಕು. ಇವರೇ ತಂದ ಕಾನೂನು, ಇವತ್ತು ಅರ್ಜಿ ಹಾಕಿದರೆ ನಾಳೆ ಸಿಕ್ಕಿಬಿಡತ್ತಾ? ಎಂದು ಪ್ರಶ್ನಿಸಿದರು.
ಹೋರಾಟ ಮಾಡೋದೆ ತಪ್ಪು ಅಂತಿಲ್ಲ, ಆದ್ರೆ ಯಾರನ್ನು ಟಾರ್ಗೆಟ್ ಮಾಡಿ ಪಾದಯಾತ್ರೆ ಮಾಡ್ತಿದ್ದಾರೆ?. ಸಿದ್ದರಾಮಯ್ಯ ವಿರುದ್ಧ ಮೇಲುಗೈ ಸಾಧಿಸಲು ಪಾದಯಾತ್ರೆ ಮಾಡ್ತಿದ್ದೀನಿ ಅಂತ ಹೇಳಲಿ. ನನಗೂ ಪಾದಯಾತ್ರೆ ಮಾಡೋಕೆ ಬರತ್ತೆ ಅಂತ ತೋರಿಸೋಕೆ ಮಾಡ್ತಿದ್ದೀನಿ ಅಂತ ಹೇಳಲಿ. ಕಾಂಗ್ರೆಸ್ ಒಳಗಿರುವ ಬಂಡಾಯ ಹತ್ತಿಕ್ಕುವುದಕ್ಕೆ ಪಾದಯಾತ್ರೆ ಅಂತ ಹೇಳಲಿ ಎಂದು ಟಾಂಗ್ ನೀಡಿದರು.