ಕರ್ನಾಟಕ

karnataka

ETV Bharat / state

ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಟೀಕೆ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​ ಸರ್ಕಾರ 6 ತಿಂಗಳು ನಡೆಸಿದ ಆಡಳಿತದ ಬಗ್ಗೆ ಕೊಟ್ಟಿರುವ ಅಂಕಿ - ಅಂಶಗಳು ಪ್ರಶ್ನಾರ್ಥಕವಾಗಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದ್ದಾರೆ.

ಕಾಂಗ್ರೆಸ್​ ಆಡಳಿತದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಟೀಕೆ
ಕಾಂಗ್ರೆಸ್​ ಆಡಳಿತದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಟೀಕೆ

By ETV Bharat Karnataka Team

Published : Nov 21, 2023, 7:10 PM IST

ಬೆಂಗಳೂರು: ಕಾಂಗ್ರೆಸ್‍ ನವರದು ನುಡಿದಂತೆ ನಡೆದ ಸರ್ಕಾರ ಅಲ್ಲ. ಸರ್ಕಾರವು 6 ತಿಂಗಳ ಆಡಳಿತದ ಕೊಟ್ಟಿರುವ ಅಂಕಿ - ಅಂಶಗಳು ಪ್ರಶ್ನಾರ್ಥಕವಾಗಿವೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣೆ ಸಂದರ್ಭದಲ್ಲಿ ಜನರಿಗೆ 5 ಗ್ಯಾರಂಟಿಗಳನ್ನು ನೀಡಿತ್ತು. ಕೊಟ್ಟ ಮಾತಿನಂತೆ ಅಥವಾ ನುಡಿದಂತೆ ನಡೆದಿದ್ದೇವೆ ಎಂದು ನಿನ್ನೆ ದೊಡ್ಡ ದೊಡ್ಡ ಜಾಹೀರಾತು ನೀಡಿದ್ದಾರೆ. ಅಂಕಿ - ಅಂಶಗಳನ್ನೂ ಕೊಟ್ಟಿದ್ದಾರೆ. ಆದರೆ, ಎಷ್ಟೋ ಜನರಿಗೆ ಅಕ್ಕಿಗೆ ಕೊಡುವ ಹಣ ಸಿಕ್ಕಿಲ್ಲ. ಮಹಿಳೆಯರಿಗೆ 2 ಸಾವಿರ ರೂಪಾಯಿ ಒಂದು ಕಂತು ಮಾತ್ರ ಸಿಕ್ಕಿದೆ. ಇನ್ನೂ 3 ತಿಂಗಳು ಬಂದಿಲ್ಲ. ವಿದ್ಯುತ್ 200 ಯೂನಿಟ್ ಎಂದಿದ್ದರು. 200 ಯೂನಿಟ್ ಬದಲು ವರ್ಷದ ಸರಾಸರಿ ಯೂನಿಟ್ ಕೊಡುತ್ತಿದ್ದಾರೆ. ಯುವನಿಧಿ ಇನ್ನೂ ಪ್ರಾರಂಭಿಸಿಲ್ಲ ಎಂದು ಹರಿಹಾಯ್ದರು.

ನಮ್ಮ ಯೋಜನೆ ಕಾಂಗ್ರೆಸ್​ ನಕಲು ಮಾಡಿದೆ: ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳು ಜನರಿಗೆ ತಲುಪುತ್ತಿಲ್ಲ. ಕಾಂಗ್ರೆಸ್ ವೈಫಲ್ಯಗಳನ್ನು ನಾವು ತಿಳಿಸುತ್ತಿದ್ದೇವೆ ಎಂದ ಅವರು, ಬಿಜೆಪಿಯವರು ಕಾಂಗ್ರೆಸ್ ಯೋಜನೆಗಳನ್ನು ನಕಲು ಮಾಡಿಲ್ಲ. ಬದಲಾಗಿ ಕಾಂಗ್ರೆಸ್ಸೇ ನಮ್ಮ ಯೋಜನೆಗಳ ನಕಲು ಮಾಡಿದೆ. ನಾವು 12 ಕೋಟಿ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದೇವೆ. ಇದು ಸಾಂದರ್ಭಿಕವಾಗಿ ಮಾಡಬೇಕಾದ ಕೆಲಸ. 1.25 ಲಕ್ಷ ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದೇವೆ. ಅನೇಕ ಟನೆಲ್ ಮಾಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 6 ಸಾವಿರ ರೂಗಳನ್ನು ಪ್ರಧಾನಿಯವರು ವರ್ಗಾಯಿಸುತ್ತಿದ್ದಾರೆ. ರಾಜ್ಯದಲ್ಲೂ 4 ಸಾವಿರವನ್ನು ಹಾಕುತ್ತಿದ್ದು, ಅದನ್ನು ನೀವು ಬಂದ್ ಮಾಡಿದ್ದೀರಿ.

ಗರೀಬ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಪಡಿತರ ಕೊಡಲಾಗಿದೆ. ಅದೇನೂ ಗ್ಯಾರಂಟಿ ಅಲ್ಲ. ಪ್ರಣಾಳಿಕೆಯಲ್ಲೂ ಇರಲಿಲ್ಲ. 220 ಕೋಟಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ಕೊಡಲಾಯಿತು. ಅದೇನೂ ಗ್ಯಾರಂಟಿ ಯೋಜನೆ ಅಲ್ಲ. ಉಜ್ವಲ ಯೋಜನೆಯಡಿ 9.6 ಕೋಟಿ ಸಿಲಿಂಡರ್​ಗಳನ್ನು ಉಚಿತವಾಗಿ ಬಡವರಿಗೆ ನೀಡಿದ್ದೇವೆ. ಅದನ್ನು ಗ್ಯಾರಂಟಿ ಎನ್ನಲಿಲ್ಲ ಎಂದು ವಿವರಿಸಿದರು.

ಮೋದಿ ಆಡಳಿತದಲ್ಲಿ ದೇಶ ಸುಭದ್ರ: ಮುಖ್ಯಮಂತ್ರಿಗಳು ದೇಶದ ಪ್ರಧಾನಿಯವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ ಅವರು, ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶ ಸುಭದ್ರವಾಗಿದೆ. ಅವರ ಕಾರ್ಯಕ್ಕೆ ದೇಶ ಸೇರಿದಂತೆ ವಿಶ್ವದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ನುಡಿದರು.

ಕಾಂಗ್ರೆಸ್​ನವರು ಎಸ್‍ಸಿಎಸ್‍ಪಿ-ಟಿಎಸ್‍ಪಿ ಬಜೆಟ್‍ನ ಶೇ 24ರಷ್ಟು ಕೊಡುವುದಾಗಿ ಹೇಳಿದ್ದೀರಿ. 3.25 ಲಕ್ಷ ಕೋಟಿಯ ಬಜೆಟ್‍ನಡಿ ನೀವೇ ಘೋಷಿಸಿದಂತೆ ಕೊಡುವುದಾದರೆ 72 ಸಾವಿರ ಕೋಟಿ ಕೊಡಬೇಕಿತ್ತು. ಬರಿ 34 ಸಾವಿರ ಕೋಟಿ ಕೊಟ್ಟಿದ್ದೀರಿ. ದಲಿತರ ಹಣ ಬೇರೆ ಕಡೆ ವರ್ಗಾವಣೆ ಮಾಡುವುದಿಲ್ಲ, 7ಡಿ ರದ್ದು ಮಾಡುವುದಾಗಿ ಮಹದೇವಪ್ಪ ಹೇಳಿದ್ದರು. ಆದರೆ, ಗ್ಯಾರಂಟಿ ಸ್ಕೀಮಿಗೆ 11,700 ಕೋಟಿಯನ್ನು ವರ್ಗಾಯಿಸಿ ದಲಿತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.

7ಡಿ ರದ್ದು ಮಾಡುವ ಮನಸ್ಸಿದ್ದರೆ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿ ದಲಿತರಿಗೆ ಮೋಸ ಮಾಡಿದ್ದೇಕೆ? ಇದಕ್ಕೆ ಮೊದಲು ಉತ್ತರ ಕೊಡಿ ಎಂದು ಸರಕಾರ ಮತ್ತು ಸಚಿವರನ್ನು ಒತ್ತಾಯಿಸಿದರು. ದಲಿತರಿಗೆ ಮಾಡಿದ ಮೋಸವನ್ನು ಸಹಿಸಲಾಗದು. ನೀವು ಹೇಳಿದಂತೆ ನಡೆಯುವುದಾದರೆ ನಿಗದಿತ ಯೋಜನೆಗೆ 11,700 ಕೋಟಿ ವಾಪಸ್ ಕೊಡಿ ಎಂದು ಆಗ್ರಹಿಸಿದರು. ನಾವು ಜನರನ್ನು ಎಚ್ಚರಿಸುತ್ತೇವೆ. ನಾವು ಹೋರಾಟ ಮುಂದುವರೆಸುತ್ತೇವೆ. ದಲಿತರಿಗೆ ಕಾಂಗ್ರೆಸ್ ಸರ್ಕಾರ ಬಹಳಷ್ಟು ಅನ್ಯಾಯ ಮಾಡಿದೆ ಎಂದು ತಿಳಿಸಿದರು.

ಶ್ರೀಮಂತ ಪಾಟೀಲ್​:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಬಳಿಕ ಮಾಜಿ ಶಾಸಕ ಶ್ರೀಮಂತ ಪಾಟೀಲ್ ಮಾತನಾಡಿ, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ನಮಗೆ ಖುಷಿ ಇದೆ. ಸಣ್ಣ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷ ಆಗಿದ್ದಾರೆ. ಹೈಕಮಾಂಡ್ ಕೆಲಸ ಮಾಡುವ ಕೌಶಲ್ಯ ನೋಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರ ಅವರು ಪಕ್ಷ ಕಟ್ಟಿ ಗೆಲ್ಲಿಸುವ ತಾಕತ್ ಇದೆ. ಅವರ ಮೇಲೆ ವಿಶ್ವಾಸ ಇದೆ ಎಂದು ಹೇಳಿದರು.

ಇದನ್ನೂ ಓದಿ:ಜಮೀರ್ ಅಹಮದ್​ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು: ಕೆ ಎಸ್​ ಈಶ್ವರಪ್ಪ ಒತ್ತಾಯ

ABOUT THE AUTHOR

...view details