ಬೆಂಗಳೂರು :ಆಕಾಶ ನೋಡುವುದಕ್ಕೂ ಕೆಲವೊಮ್ಮೆ ನೂಕುನುಗ್ಗಲಾಗುತ್ತದೆ. ಇನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಾತ್ರೆ ಸೇರುವುದು ಹೆಚ್ಚೇ? ಸೇರುವ ಜನ ಎಷ್ಟು ಸಮರ್ಥರು ಎಂಬುದೂ ಮುಖ್ಯವಲ್ಲವೇ? ಎಂದು ಕಾಂಗ್ರೆಸ್ ಜಾತ್ರೆ ಶುರುವಾಗಲಿದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಡಿ.ಕೆ ಶಿವಕುಮಾರ್ ರಾಜ್ಯಾದ್ಯಂತ ಕಾಂಗ್ರೆಸ್ ಜಾತ್ರೆ ಶುರುವಾಗಿದೆ ಎಂದಿದ್ದಾರೆ, ಏನು ಪ್ರಯೋಜನ? ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಹೊರಗಿನವರು ಒಳಗಿನವರು ಎಂಬುದು ಕಾಂಗ್ರೆಸ್ ಪಕ್ಷದಲ್ಲಿಲ್ಲ ಎನ್ನುತ್ತಲೇ ಸಿದ್ದರಾಮಯ್ಯ ಜೊತೆ ಕಾದಾಡುತ್ತೀರಿ ಎಂದು ಟ್ವೀಟ್ ಮೂಲಕ ಡಿಕೆಶಿಗೆ ಬಿಜೆಪಿ ಟಾಂಗ್ ನೀಡಿದೆ.
ಮೌನಂ ಸಮ್ಮತಿ ಲಕ್ಷಣಂ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ದೇಶದ ದೈನಂದಿನ ವಿದ್ಯಮಾನಗಳ ಬಗ್ಗೆ ಮಾಹಿತಿಯ ಕೊರತೆಯಿದೆ. ಮುಂದಿನ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಮ್ ನಬಿ ಹೇಳಿಕೆ ನೀಡಿದ್ದಾರೆ. ಡಿಕೆಶಿಯವರೇ, ನೀವು ಯಾವ ಜಾತ್ರೆಯ ಬಗ್ಗೆ ಹೇಳಿದ್ದು? ಪಕ್ಷ ತೊರೆಯುತ್ತಿರುವವರ ಜಾತ್ರೆಯ ಬಗ್ಗೆಯೇ? ಎಂದು ಲೇವಡಿ ಮಾಡಿದೆ.
ಯುಪಿಎ ಎಲ್ಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯ ಮಾಡಿದ್ದಾರೆ. ಬಂಗಾಳದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ ಬ್ಯಾನರ್ಜಿ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಇದೊಂದು ಕಪಾಳ ಮೋಕ್ಷವಲ್ಲವೇ.? ಯುಪಿಎ ಎಲ್ಲಿದೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದಾಗ, ಯುಪಿಎ ಅಂಗ ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರೂ ವಿರೋಧಿಸಿಲ್ಲ, ಇದರ್ಥವೇನು? ಮೌನಂ ಸಮ್ಮತಿ ಲಕ್ಷಣಮ್!!!
ದೇಶದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಯುಪಿಎ ಎನ್ನುವುದು ಅಸ್ತಿತ್ವ ಕಳೆದುಕೊಂಡಿದೆ, ಕಾಂಗ್ರೆಸ್ ಪಕ್ಷ ಕೂಡ ಈಗ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ವ್ಯಂಗ್ಯವಾಡಿದೆ.
ಸಿದ್ದುಗೆ ಗುದ್ದು:ನೀವು ಜೆಡಿಎಸ್ ಜೊತೆ ಲಾಭದ ಆಟ ಆಡಿಲ್ಲವೇ ಸಿದ್ದರಾಮಯ್ಯ? ಜೆಡಿಎಸ್ ಜತೆ ಮೈತ್ರಿ ಸರ್ಕಾರ ರಚಿಸಿದ್ದು ಭಾಯಿ ಭಾಯಿ ಅಲ್ಲವೇ? ನೀವೇ ಸಿಎಂ ಆಗಿದ್ದಾಗ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಜೊತೆ ಯಾವ ಆಟ ಆಡಿದ್ದು? ರಾಜ್ಯ ಕಂಡ ಅನುಕೂಲ ಸಿಂಧು ರಾಜಕಾರಣಿ ಅಂತಿದ್ದರೆ, ಅದು ನೀವೇ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
ದಲಿತರೇ ಮುಂದಿನ ಸಿಎಂ ಎಂದು ಘೋಷಿಸಿ :ಸಿದ್ದರಾಮಯ್ಯ ಅವರೇ, ಲಾಭ ಇಲ್ಲದೇ ನೀವು ಏನನ್ನಾದರೂ ಮಾಡಿದ್ದೀರಾ? ಅಹಿಂದ ಚಳವಳಿ ಹುಟ್ಟು ಹಾಕಿದ್ದು, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದು, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಪರಮೇಶ್ವರ್ ಅವರನ್ನು ಸೋಲಿಸಿದ್ದು, ನೀವು ಮಾಡಿದ್ದೆಲ್ಲವೂ ಲಾಭಕ್ಕಾಗಿಯೇ.
ನಿಮ್ಮ ಮಾತಿನ ಧ್ವನಿ ಹೇಗಿದೆಯೆಂದರೆ ಜೀವನದ ಉದ್ದಕ್ಕೂ ನೀವು ನಿಸ್ವಾರ್ಥ ಸೇವೆಯಲ್ಲೇ ಕಾಲ ಕಳೆದಂತೆ ಇದೆ. ಆದರೆ, ವಾಸ್ತವ ಬೇರೆಯೇ ಇದೆ. ನೀವೆಷ್ಟು ಸ್ವಾರ್ಥ ರಾಜಕಾರಣಿ ಎಂಬುದಕ್ಕೆ ನಿದರ್ಶನಗಳು ಹತ್ತಾರಿವೆ. ಲಾಭವಿಲ್ಲದೆ ನೀವು ಯಾವುದೇ ಕೆಲಸವನ್ನೂ ಮಾಡಿಲ್ಲ ಎಂದು ಟೀಕಿಸಿದೆ.
ನಿಮ್ಮದು ನಿಜಕ್ಕೂ ನಿಸ್ವಾರ್ಥ ಸೇವೆ ಎಂದಾದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವುದೇ ಅಧಿಕಾರ ಬೇಡ ಎಂದು ಘೋಷಿಸಿ, ದಲಿತರೇ ಮುಂದಿನ ಸಿಎಂ ಎಂದು ಘೋಷಿಸಿ, ಡಿಕೆಶಿಗೆ ಯಾವುದೇ ರಾಜಕೀಯ ಕಿರುಕುಳ ನೀಡುವುದಿಲ್ಲ ಎಂದು ಭರವಸೆ ನೀಡಿ, ಆಗ ನಿಮ್ಮ ಲಾಭವಿಲ್ಲದ ರಾಜಕೀಯ ಮುಖವನ್ನು ಒಪ್ಪುತ್ತೇವೆ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ದಾವಣಗೆರೆ - ಚಿತ್ರದುರ್ಗದಿಂದ ಕಾಂಗ್ರೆಸ್ನಲ್ಲಿ ಸ್ಪರ್ಧಿಸಲು ಯಾವುದೇ ಗಂಡಸರು ಇರಲಿಲ್ವಾ: ಭೈರತಿ ಬಸವರಾಜ್