ಕಾವೇರಿ ನೀರು ವಿಚಾರವಾಗಿ ಕಮಲ-ದಳ ಜಂಟಿ ಹೋರಾಟ ಬೆಂಗಳೂರು :ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜಂಟಿ ಪ್ರತಿಭಟನೆ ನಡೆಸಿದರು. ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಡಿಎಂಕೆ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಇದು ಮೊದಲ ಜಂಟಿ ಹೋರಾಟವಾಗಿದ್ದು, ಧರಣಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ಡಿ ವಿ ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಬಿಜೆಪಿ ಸಂಸದರು, ಉಭಯ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು, ಉಭಯ ಪಕ್ಷದ ಪ್ರಮುಖರು ಭಾಗವಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು.
ಪ್ರತಿಭಟನೆಯಲ್ಲಿ ತಮಿಳುನಾಡು ಏಜೆಂಟ್ ಡಿಕೆಶಿಗೆ ಧಿಕ್ಕಾರ, ಬರಿದಾಯ್ತು ಕಾವೇರಿ.. ಹಾಳಾಯ್ತು ಬೆಂಗಳೂರು, ಕುಡಿಯುವ ನೀರಿಗೆ ಸಂಚಕಾರ ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಜೀವ ನದಿ ಕಾವೇರಿಯ ನೀರು ನಮ್ಮದು ಎಂಬ ವಿವಿಧ ಘೋಷಣೆಗಳನ್ನು ಕೂಗಿದರು. ಸಿಎಂ, ಡಿಸಿಎಂ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ, ಡಿಸಿಎಂ ಡಿಎಂಕೆ ಏಜೆಂಟರಾಗಿದ್ದಾರೆ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಡಿಎಂಕೆ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ಕಿಡಿಕಾರಿದರು. ರೈತರ ಹೋರಾಟಕ್ಕೆ ಬಿಜೆಪಿ ಜೆಡಿಎಸ್ ಬೆಂಬಲ ನೀಡುತ್ತದೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಅಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಅದಕ್ಕೆ ನೀವೇ ಕಾರಣ ಆಗುತ್ತೀರ. ರಾಜ್ಯದ ಜನರ ಹಿತದೃಷ್ಟಿಯಿಂದ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ನಿಮ್ಮ ರಾಜಕೀಯ ನಾಟಕಕ್ಕೆ ಅವಕಾಶ ಕೊಡಲ್ಲ. ನಾಲ್ಕು ಲಕ್ಷ ಹೆಕ್ಟೇರ್ ತಮಿಳುನಾಡು ಬೆಳೆ ಬೆಳೆದಿದ್ದಾರೆ. ನೀವು ತಮಿಳುನಾಡಿನ ಏಜೆಂಟರಾಗಿ ವರ್ತನೆ ಮಾಡುತ್ತಿದ್ದಾರೆ. ಜನರ ರಕ್ಷಣೆಗೆ ಮುಂದಾಗದೇ ಇದ್ದರೆ ನಾವು ಹೋರಾಟ ಮಾಡುತ್ತೇವೆ. ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಗ್ಯಾರಂಟಿಯ ಭ್ರಮೆಯಲ್ಲಿದೆ :ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಗ್ಯಾರಂಟಿಯ ಭ್ರಮಾ ಲೋಕದಲ್ಲಿದೆ. ಅದು ಬಿಟ್ಟು ಬೇರೆ ಏನು ಕಾಣುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನ್ಯಾಯ ದೊರಕುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದರು. ನಾಡಿನ ನೆಲ ಜಲ ರಕ್ಷಣೆ ಮಾಡಲು ಎಲ್ಲದಕ್ಕೂ ತಾರ್ಕಿಕ ಅಂತ್ಯ ಕಾಣಲು ನಾವು ಒಟ್ಟಿಗೆ ಹೋರಾಟ ಮಾಡುತ್ತೇವೆ. ರೈತರ ಬದುಕಿನ ಪ್ರಶ್ನೆ ನಮ್ಮ ಮುಂದಿದೆ. ಇದರಲ್ಲಿ ರಾಜಕಾರಣ ಇಲ್ಲ. ಆದರೆ ಸಿಎಂ ಇಲ್ಲಿ ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಸರ್ವ ಪಕ್ಷ ಸಭೆ ನಡೆಸಬೇಕು ಎಂದು ನಾವು ಒತ್ತಡ ಹಾಕಿದ ಬಳಿಕ ಸಭೆ ಕರೆದಿದ್ದರು. ಆದರೆ ನಮ್ಮ ಸಲಹೆಗಳನ್ನು ಯಾವುದನ್ನೂ ಪರಿಗಣಿಸಿಲ್ಲ. ಕೋರ್ಟ್ ಮುಂದೆ ಹೋಗಲು ಉಡಾಫೆ ಮಾಡಿದರು ಎಂದು ಟೀಕಿಸಿದರು.
ನೀರಾವರಿ ಸಚಿವರಿಗೆ ಬೆಂಗಳೂರಿನಲ್ಲಿ ವ್ಯವಹಾರ ಮಾಡಲು ಸಮಯ ಇಲ್ಲ. ಅವರಿಗೆ ನೀರಿನ ಬಗ್ಗೆ ಸಮಯ ಕೊಡಲು ಆಗುತ್ತಾ?. 10,000 ಕ್ಯೂಸೆಕ್ಒಳಹರಿವು ಇದೆ ಎಂದು ಹೇಳುತ್ತಾರೆ. ಇದು ರಾಜ್ಯ ಸರ್ಕಾರದ ಉಡಾಫೆಗೆ ಹಿಡಿದ ಕನ್ನಡಿ. ಡಿಸಿಎಂ 3000 ಕ್ಯೂಸೆಕ್ ನೀರು ಬಿಡಲು ಹೇಳಿರುವುದು ತೃಪ್ತಿ ತಂದಿದೆ ಎಂದಿದ್ದಾರೆ. ಮೆಟ್ಟೂರು ಅಣೆಕಟ್ಟಿನಲ್ಲಿ ಒಳ ಹರಿವು 6,450 ಕ್ಯೂಸೆಕ್ ಇದೆ. ಹೊರ ಹರಿವು 7371 ಕ್ಯೂಸೆಕ್ ಇದೆ. ಆದರೆ, ನಮಗೆ ಒಂದು ಬೆಳೆ ಬೆಳೆಯಲು ಆಗುತ್ತಿಲ್ಲ. ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಸ್ಥಳ ಪರಿಶೀಲನೆ ಮಾಡುವಂತೆ ಮನವಿ ಮಾಡಲು ಮೀನಾಮೇಷ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪತ್ರ ಬರೆದಿದ್ದಾರೆ. ಆದರೆ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಪಿಎಂ ನೇತೃತ್ವದ ಸಭೆಗೆ ಬರ್ತಾರ?. ಕಾಂಗ್ರೆಸ್ನವರು ಸ್ಟಾಲಿನ್ ಅವರನ್ನು ಸಭೆಗೆ ಬರಲು ಒಪ್ಪಿಸುತ್ತೀರ?. ಗಾಂಧಿ ಪ್ರತಿಮೆ ಮುಂದೆ ಸಹಭಾಗಿತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಮುಂದಿನ ದಿನ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಸದಸ್ಯರು ರಾಜ್ಯದ ಪರ ಮಾತನಾಡುತ್ತಿದ್ದಾರೆ :ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತ, ರಾಜ್ಯ ಸರ್ಕಾರ ಕಳೆದ ಮೂರು ನಾಲ್ಕು ತಿಂಗಳಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸರಿಯಾದ ವಾದ ಮಂಡಿಸಿಲ್ಲ. ಹಾಗಾಗಿ ರಾಜ್ಯಕ್ಕೆ ವ್ಯತಿರಿಕ್ತ ಆದೇಶ ಬರುವಂತಾಗಿದೆ. ಬರ ಪೀಡಿತ ಎಂದು ಪ್ರಾಧಿಕಾರದ ಮುಂದೆ ತರಲು ಸರ್ಕಾರ ವಿಫಲವಾಗಿದೆ. ಜೂನ್ ವರೆಗೆ ನಮಗೆ ಕುಡಿಯಲು, ರೈತರಿಗೆ ಒಟ್ಟು 106 ಟಿಎಂಸಿ ನೀರು ಬೇಕು. ಆದರೆ ಈಗ ಇರುವ ನೀರು ಬರೀ 50 ಟಿಎಂಸಿ ಇದೆ. ನಿನ್ನೆ ಬೆಂಗಳೂರು ಬಂದ್ ಇತ್ತು. ಆದರೂ, 19 ದಿನಗಳ ಕಾಲ 3000 ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಲಾಗಿದೆ. ಡಿಸಿಎಂ ಡಿಕೆಶಿ ಅವರು ಸಿಡಬ್ಲ್ಯೂಆರ್ಎ ಶಿಫಾರಸು ನಮಗೆ ತೃಪ್ತಿ ತಂದಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಕಳೆದ ನಾಲ್ಕು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯದ ಪರ ಮಾತನಾಡಿರುವ ಬಗ್ಗೆ ಬಹಿರಂಗಪಡಿಸಿ. ಕೇಂದ್ರ ಸರ್ಕಾರದ ಸದಸ್ಯರು, ರಾಜ್ಯದ ಪರ ಮಾತನಾಡಿದ್ದಾರೋ ಇಲ್ಲವೋ ಎಂದು ಬಹಿರಂಗಪಡಿಸಿ. ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ :ಇದೇ ವೇಳೆ ಶಾಸಕ ಬಿ ವೈ ವಿಜಯೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಕಾವೇರಿ ವಿಚಾರದಲ್ಲಿ ಸರ್ಕಾರ ಪ್ರತಿ ಹಂತದಲ್ಲೂ ಮೈಮರೆತಿದೆ. ಕಾಂಗ್ರೆಸ್ ಸಂಪೂರ್ಣವಾಗಿ ಎಡವಿದೆ. ಜೆಡಿಎಸ್ ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ನೀವು ರಾಜಕಾರಣ ಮಾಡುತ್ತಿದ್ದೀರ. ಕಾವೇರಿ ಕೊಳ್ಳದ ರೈತರ ಪರವಾಗಿ ಮಾತನಾಡಲು ಆಗುತ್ತಿಲ್ಲ. ಇಂಡಿಯಾ ಮೈತ್ರಿಗಾಗಿ ಸ್ಟಾಲಿನ್ ಜೊತೆ ಕುಳಿತುಕೊಳ್ಳುತ್ತಾರೆ. ಆದರೆ ರೈತರ ಸಂಕಷ್ಟದ ಬಗ್ಗೆ ಮಾತನಾಡಲು ಆಗುತ್ತಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ :ಕಾವೇರಿ ನೀರು ವಿವಾದಕ್ಕೆ ಬೇಕಿದೆ ಶಾಶ್ವತ ಪರಿಹಾರ: ಸುತ್ತೂರು ಶ್ರೀ