ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಪ್ರಚಾರದ ಕಣ ರಂಗೇರುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ನಡುವೆ ಪರೋಕ್ಷ ಮೈತ್ರಿ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ದೆಹಲಿಯಲ್ಲಿ ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
'ದಳಪತಿ'ಗಳ ಎಲ್ಲರ ಚಿತ್ತ ಏಕೆ?
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಜೆಡಿಎಸ್ 7 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಹೀಗಾಗಿ, 6 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಇದೀಗ ಜೆಡಿಎಸ್ ಸ್ಪರ್ಧಿಸದ ಕಡೆ ಯಾರಿಗೆ ಬೆಂಬಲ ಸಿಗಲಿದೆಯೋ ಅವರಿಗೆ ಗೆಲುವು ಅನಾಯಾಸವಾಗಿ ಸಿಗಲಿದೆ. ಹಾಗಾಗಿ, ಇದೀಗ 'ದಳಪತಿ'ಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
ಜೆಡಿಎಸ್ ಎಲ್ಲೆಡೆ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಈಗಾಗಲೇ ಪರಿಷತ್‌ನಲ್ಲಿ ಇರುವ ಮೈತ್ರಿಯ ವಿಸ್ತರಣೆ ದೃಷ್ಠಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ, ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಪರಿಷತ್‌ನಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾದರೂ ಬಹುಮತಕ್ಕೆ ಅಗತ್ಯ ಸಂಖ್ಯೆ ಇಲ್ಲದ ಕಾರಣ ಜೆಡಿಎಸ್ ಸಂಖ್ಯೆ ಬಳಸಿದೆ. ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಪ್ರತಿಪಕ್ಷ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡುವಲ್ಲಿ ಸಫಲವಾಗಿದೆ. ಇದರ ಲಾಭವನ್ನು ಈಗ ಚುನಾವಣೆಯಲ್ಲಿಯೂ ಪಡೆಯಲು ಬಿಜೆಪಿ ನಿರ್ಧರಿಸಿದೆ.
ಪರಿಷತ್‌ನಲ್ಲಿ ಪಕ್ಷಗಳ ಬಲಾಬಲ ಹೀಗಿದೆ..
ಸದ್ಯ 75 ಸದಸ್ಯಬಲದ ವಿಧಾನ ಪರಿಷತ್‌ನಲ್ಲಿ ಬಿಜೆಪಿ 32 ಸ್ಥಾನ, ಕಾಂಗ್ರೆಸ್ 29 ಸ್ಥಾನ, ಜೆಡಿಎಸ್ 12 ಸ್ಥಾನ ಹೊಂದಿದೆ. ಒಂದು ಸ್ಥಾನ ಪಕ್ಷೇತರ ಸದಸ್ಯರದ್ದು. ಬಹುಮತಕ್ಕೆ 38 ಸದಸ್ಯ ಬಲ ಬೇಕಿದೆ. ಈ ಚುನಾವಣೆಯ ನಂತರ ಬಿಜೆಪಿ ಸಂಖ್ಯೆ ಎಷ್ಟಕ್ಕೆ ತಲುಪಲಿದೆ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಬಹುಮತ ಸಿಕ್ಕರೂ, ಸಿಗದೇ ಇದ್ದರೂ ಪರಿಷತ್‌ನಲ್ಲಿ ಮೈತ್ರಿ ಮುಂದುವರೆಯಬೇಕು ಎನ್ನುವ ಕುರಿತು ಚುನಾವಣೆಗೆ ಮೊದಲೇ ನಿರ್ಧಾರವಾದರೆ ಒಳಿತು ಎನ್ನುವ ಕಾರಣಕ್ಕೆ ಇದೀಗ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡುವ ವಿಷಯದ ಕುರಿತು ಬಿಜೆಪಿ ನಾಯಕರು ಹೇಳಿಕೆ ನೀಡಲು ಶುರು ಮಾಡಿದ್ದಾರೆ.
ಪರಿಷತ್‌ನಲ್ಲಿ ಬಹುಮತಕ್ಕೆ ಅಗತ್ಯ ಸಂಖ್ಯೆ ಬಿಜೆಪಿಗೆ ಬಂದರೂ ಮೈತ್ರಿ ಅಬಾಧಿತವಾಗಿ ಮುಂದುವರೆಯಲು ಪೂರಕವಾಗಿ ಚುನಾವಣಾ ಪೂರ್ವ ಬೆಂಬಲ ನೀಡುವಂತೆ ಜೆಡಿಎಸ್‌ಗೆ ಬಿಜೆಪಿ ಪ್ರಸ್ತಾವನೆ ಸಲ್ಲಿಸಿದೆ. ಯಡಿಯೂರಪ್ಪ ಅವರ ಹೇಳಿಕೆಯ ಹಿಂದೆ ಇದೇ ಉದ್ದೇಶವಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದನ್ನು ತಕ್ಷಣಕ್ಕೆ ಜೆಡಿಎಸ್ ಒಪ್ಪಿಕೊಳ್ಳದೇ ಇದ್ದರೂ ಬಿಜೆಪಿಗೆ ಬೆಂಬಲ ನೀಡುವ ಕುರಿತ ಚಿಂತನೆ ಜೆಡಿಎಸ್ ನಾಯಕರಲ್ಲಿದೆ. ಪರಿಷತ್ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡುವ ಇಂಗಿತ ವ್ಯಕ್ತವಾಗಿದೆ ಎನ್ನಲಾಗಿದೆ.
ಕುತೂಹಲ ಕೆರಳಿಸಿದ ಮೋದಿ-ಗೌಡರ ಭೇಟಿ