ಬೆಂಗಳೂರು:ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬದ್ಧ ವೈರಿಗಳಂತಿದ್ದ ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಮೈತ್ರಿಯಾಗಲು ವೇದಿಕೆ ಸಜ್ಜಾಗಿದೆ. ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿಯು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸಭಾಪತಿ ಸ್ಥಾನ ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ಸಮ್ಮತಿಸಿದೆ. ಈ ಪ್ರಕಾರವಾಗಿ ಸದನದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ವಿಧಾನ ಪರಿಷತ್‍ನ ನೂತನ ಸಭಾಪತಿಯಾಗುವುದು ಬಹುತೇಕ ಖಚಿತವಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸೂಚನೆ ಮೇರೆಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಹೊರಟ್ಟಿ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದರು.
ಪಕ್ಷದ ಮುಖಂಡರು ಹಾಗೂ ಪರಿಷತ್ ಸದಸ್ಯರ ಜೊತೆ ಸಂಜೆ ಚರ್ಚೆ ನಡೆಸಿ ತಮ್ಮ ನಿಲುವು ತಿಳಿಸುತ್ತೇನೆ ಎಂದು ಯಡಿಯೂರಪ್ಪ ಹೊರಟ್ಟಿಗೆ ತಿಳಿಸಿದ್ದರು. ಅದರಂತೆ ನಿನ್ನೆ ರಾತ್ರಿ ಸಿಎಂ ನೇತೃತ್ವದಲ್ಲಿ ನಡೆದ ಪರಿಷತ್ ಸದಸ್ಯರ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಬಿಜೆಪಿಗೆ ಉಪ ಸಭಾಪತಿ ಸ್ಥಾನ, ಜೆಡಿಎಸ್ಗೆ ಸಭಾಪತಿ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ.