ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಮತ್ತೊಮ್ಮೆ ಚುನಾವಣಾ ಪೂರ್ವ ಮೈತ್ರಿ ಘೋಷಣೆಯಾಗಿದೆ.(BJP JDS alliance). ಹೈಕಮಾಂಡ್ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ನಡೆದಿದ್ದು, ಈ ಮೈತ್ರಿಯನ್ನು ಉಭಯ ಪಕ್ಷಗಳ ನಾಯಕರು ಸ್ವಾಗತಿಸಿದ್ದಾರೆ. 24+4 ಸ್ಥಾನಗಳ ಹಂಚಿಕೆ ನಡೆದಿದ್ದು ಇದನ್ನು ರಾಜ್ಯ ಬಿಜೆಪಿ ನಾಯಕರು ಖಚಿತಪಡಿಸಿದ್ದಾರೆ. ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ದ ಎಂದು ಘೋಷಿಸಿದ್ದಾರೆ. ಆರಂಭದಲ್ಲೇ ಯಾವುದೇ ಬಂಡಾಯವೇಳದಿರುವುದು ಮೈತ್ರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಜೆಡಿಎಸ್ಗೆ 4 ಕ್ಷೇತ್ರಗಳು:ರಾಜ್ಯದಲ್ಲಿ ಕಳೆದ ಬಾರಿ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಸ್ಥಾನ ಹಂಚಿಕೆ ಮಾಡಿಕೊಂಡಿದ್ದವು. ಆ ಮೈತ್ರಿಕೂಟಕ್ಕೆ ದಯನೀಯ ಸೋಲಾಗಿತ್ತು. ಆದರೆ ಈ ಬಾರಿ ಪ್ರತಿಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, 4 ಸ್ಥಾನ ಜೆಡಿಎಸ್ಗೆ ಕೊಟ್ಟು 24ರಲ್ಲಿ ಬಿಜೆಪಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡಿದೆ. ಮೈತ್ರಿಯ ಮಾತುಕತೆ ಪ್ರಕಾರ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಕೇಳಿದ್ದು, ಇದಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಬಹುತೇಕ ಒಪ್ಪಿಕೊಂಡಿದ್ದಾರೆ. ಮಂಡ್ಯ ವಿಚಾರದ ಬಗ್ಗೆ ಮಾತ್ರ ಸ್ಪಷ್ಟ ನಿಲುವಿಗೆ ಬಂದಿಲ್ಲ ಎನ್ನಲಾಗಿದೆ. ಆದರೆ 4 ಸ್ಥಾನ ಕೊಡುವುದಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನವನ್ನು ಜೆಡಿಎಸ್ ಗೆದ್ದಿತ್ತು. ಅಲ್ಲದೆ ಹಾಸನ ಜೆಡಿಎಸ್ನ ಭದ್ರಕೋಟಿ. ಹಾಗಾಗಿ ಈ ವಿಚಾರದಲ್ಲಿ ಯಾವುದೇ ತಕರಾರಿಲ್ಲ. ಇದರ ಜೊತೆಗೆ ಜೆಡಿಎಸ್ ಪ್ರಬಲವಾಗಿರುವ ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಂತರ ಕ್ಷೇತ್ರಗಳ ವಿಚಾರದ ಬಗ್ಗೆ ಚರ್ಚೆಯಾಗಿದೆ. ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದರಿದ್ದರೂ ಆ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಸಮ್ಮತಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ಗೆ ಹೆಚ್ಚಿನ ಬಲವಿರುವ ಕಾರಣ ಆ ಕ್ಷೇತ್ರದ ಬಗ್ಗೆಯೂ ತಕರಾರಿಲ್ಲ. ಆದರೆ ಮಂಡ್ಯದಲ್ಲಿ ಕಳೆದ ಬಾರಿ ಸುಮಲತಾಗೆ ಬಿಜೆಪಿ ಬೆಂಬಲ ನೀಡಿತ್ತು. ಜೊತೆಗೆ ಸುಮಲತಾ ಕೂಡ ಸರ್ಕಾರದ ಜೊತೆಗೆ ಸದಾ ಬೆಂಬಲವಾಗಿದ್ದರು. ಹೀಗಾಗಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಈಗ ಈ ಕ್ಷೇತ್ರ ಜೆಡಿಎಸ್ಗೆ ಕೊಟ್ಟರೆ ಸುಮಲತಾಗೆ ಬೇರೆ ಕ್ಷೇತ್ರ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ವಿಚಾರದಲ್ಲಿ ಚರ್ಚೆ ನಡೆದಿದೆ.