ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ ಬಿಜೆಪಿ ಜನಸ್ಪಂದನ: ಪಕ್ಷಕ್ಕೆ ನೆಲೆ ಇಲ್ಲದೆಡೆ ಬಲ ಪ್ರದರ್ಶಿಸಿ ಸೈ ಎನಿಸಿಕೊಂಡ ವಲಸಿಗ ಸಚಿವರು - etv bharat kannada

ದೊಡ್ಡಬಳ್ಳಾಪುರ ಸಮಾವೇಶದ ಮೂಲಕ 2023ರ ರಾಜ್ಯ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಬಿಜೆಪಿ ಧುಮುಕಿದೆ. ಪಕ್ಷ ದುರ್ಬಲವಾಗಿರುವ ಹಳೆ ಮೈಸೂರು ಭಾಗದ ಬಯಲು ಸೀಮೆಯ ಭಾಗವನ್ನೇ ಆಯ್ದುಕೊಳ್ಳಲಾಗಿದ್ದು, ದೊಡ್ಡಬಳ್ಳಾಪುರದ ಮೂಲಕ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದೆ.

bjp-janaspandana-program-succeeded-in-doddaballapur
ದೊಡ್ಡಬಳ್ಳಾಪುರ ಸಮಾವೇಶ

By

Published : Sep 11, 2022, 7:41 AM IST

ಬೆಂಗಳೂರು:ಪಕ್ಷಕ್ಕೆ ನೆಲೆ ಇಲ್ಲದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದ ವ್ಯಾಪ್ತಿಯಲ್ಲಿ ನಡೆದ ಬಿಜೆಪಿಯ ಮೊದಲ ಜನಸ್ಪಂದನ ಸಮಾವೇಶಕ್ಕೆ ಜನಸಾಗರ ಹರಿದುಬಂದಿದ್ದು, ರಾಜ್ಯ ಬಿಜೆಪಿ ನಾಯಕರು ಫುಲ್ ಖುಷಿಯಾಗಿದ್ದಾರೆ. ನಾಯಕರ ನಿರೀಕ್ಷೆ ಮೀರಿ ಜನಸ್ತೋಮ ಜಮಾವಣೆಯಾಗಿದ್ದನ್ನು ಕಂಡು ಎಲ್ಲ ನಾಯಕರು ಕಾರ್ಯಕ್ರಮ ಆಯೋಜನೆ ಮಾಡಿದ ನಾಯಕರನ್ನು ವೇದಿಕೆ ಮೇಲೆಯೇ ಹಾಡಿ ಹೊಗಳಿದರು.

ದೊಡ್ಡಬಳ್ಳಾಪುರ ಸಮಾವೇಶದ ಮೂಲಕ 2023ರ ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಬಿಜೆಪಿ ಧುಮುಕಿದೆ. ಪಕ್ಷ ದುರ್ಬಲವಾಗಿರುವ ಹಳೆ ಮೈಸೂರು ಭಾಗದ ಬಯಲು ಸೀಮೆಯ ಭಾಗವನ್ನೇ ಆಯ್ದುಕೊಳ್ಳಲಾಗಿದ್ದು, ದೊಡ್ಡಬಳ್ಳಾಪುರದ ಮೂಲಕ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದೆ. ಈ ಭಾಗದಲ್ಲಿ ಕೇವಲ ಇಬ್ಬರು ಶಾಸಕರು ಮಾತ್ರ ಇದ್ದರೂ ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಜನ ಸೇರಿದ್ದು ಬಿಜೆಪಿ ನಾಯಕರ ಕಣ್ಣರಳುವಂತೆ ಮಾಡಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನತೆ

ಜನಸ್ತೋಮ ಕಂಡು ಸ್ವತಃ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅತೀವ ಸಂತಸ ವ್ಯಕ್ತಪಡಿಸಿದರು. ಸಮಾವೇಶ ಆಯೋಜನೆ ಜವಾಬ್ದಾರಿ ಹೊತ್ತಿದ್ದ ಸಚಿವರಾದ ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ ತಂಡವನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಸಮಾರಂಭದ ವೇದಿಕೆಯಲ್ಲಿ ಆಸೀನರಾಗಿದ್ದ ಪ್ರತಿಯೊಬ್ಬ ನಾಯಕರ ಬಾಯಲ್ಲಿಯೂ ಸುಧಾಕರ್ ಅಂಡ್ ಟೀಂ ಭೇಷ್ ಎನ್ನಿಸಿಕೊಂಡಿತು.

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಎಸ್​ವೈ ಹಾಗೂ ಸಿಎಂ ಬೊಮ್ಮಾಯಿ

1. ಟೀಕಾಕಾರರಿಗೆ ಉತ್ತರವೆಂದ ವಲಸಿಗರು:ಪಕ್ಷಕ್ಕೆ ನೆಲೆ ಇಲ್ಲ, ಈ ಭಾಗದಲ್ಲಿ ಬಿಜೆಪಿಗೆ ಜನ ಬೆಂಬಲ ನೀಡಲ್ಲ ಎಂದು ಟೀಕಿಸುತ್ತಿದ್ದವರಿಗೆ ಈ ಸಮಾವೇಶದಲ್ಲಿ ಸೇರಿದ ಜನರೇ ಉತ್ತರ ನೀಡಿದ್ದಾರೆ ಎಂದು ಸುಧಾಕರ್ ಸೇರಿದಂತೆ ಕಾರ್ಯಕ್ರಮ ಆಯೋಜನೆ ಜವಾಬ್ದಾರಿ ವಹಿಸಿಕೊಂಡಿದ್ದ ನಾಯಕರು ಹೇಳಿದರು. ವಿಶೇಷವಾಗಿ ಕಾರ್ಯಕ್ರಮದ ಆಯೋಜನೆ ನೇತೃತ್ವ ವಹಿಸಿದ ಎಲ್ಲರೂ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿರುವ ನಾಯಕರೇ ಆಗಿದ್ದು ವಿಶೇಷ.

2. ಬಿಎಸ್​​ವೈಗೆ ಜೈಕಾರ:ಅಧಿಕಾರದಲ್ಲಿ ಇರಲಿ ಇಲ್ಲದೆ ಇರಲಿ ಯಡಿಯೂರಪ್ಪ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ಬಿಜೆಪಿ ಸಮಾವೇಶದಲ್ಲಿ ಸ್ವಾಗತದಿಂದ ಹಿಡಿದು ಸಮಾವೇಶ ಮುಗಿಯುವವರೆಗೂ ಯಡಿಯೂರಪ್ಪ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಚಪ್ಪಾಳೆ, ಶಿಳ್ಳೆ ಮೊಳಗುತ್ತಿತ್ತು. ಜೈಕಾರಗಳು ಕೇಳಿಬರುತ್ತಿದ್ದವು. ಇನ್ನುಳಿದ ನಾಯಕರ ಹೆಸರುಗಳಿಗೆ ಅಲ್ಲೋ ಇಲ್ಲೋ ಬೆಂಬಲ ಕೇಳಿಬಂದರೆ ಯಡಿಯೂರಪ್ಪ ಹೆಸರಿಗೆ ಮಾತ್ರ ಭರಪೂರ ಬೆಂಬಲ ವ್ಯಕ್ತವಾಗುತ್ತಿತ್ತು.

3. ಬಿಎಸ್​​ವೈ ಭಾಷಣದ ನಂತರ ಜನರ ನಿರ್ಗಮನ:ಕಾರ್ಯಕ್ರಮ ಅಧಿಕೃತವಾಗಿ ಆರಂಭಗೊಂಡ ನಂತರ ಮೊದಲಿಗರಾಗಿ ಮಾತನಾಡಿದ ಯಡಿಯೂರಪ್ಪ ಕಾರ್ಯಕರ್ತರು ಉತ್ಸಾಹಗೊಳ್ಳುವಂತೆ ಭಾಷಣ ಮಾಡಿದರು. ಜಯಭೇರಿಯ ಸಂಕಲ್ಪಕ್ಕೆ ಕರೆ ನೀಡಿದರು. ಯಡಿಯೂರಪ್ಪ ಭಾಷಣ ಮುಗಿಯುತ್ತಿದ್ದಂತೆ ಜನ ನಿಧಾನಕ್ಕೆ ಜಾಗ ಖಾಲಿ ಮಾಡಲು ಶುರು ಮಾಡಿದರು.

ಸಿಎಂ ಭಾಷಣ ಮಾಡುತ್ತಿದ್ದರೂ ಜನ ತಲೆ ಕೆಡಿಸಿಕೊಳ್ಳದೆ ಹಿಂದಿನಿಂದ ಜಾಗ ಖಾಲಿ ಮಾಡಿ ಊಟದ ವ್ಯವಸ್ಥೆ ಕಲ್ಪಿಸಿದ್ದ ಜಾಗದತ್ತ ತೆರಳುತ್ತಿದ್ದರು. ಸಮಾವೇಶದ ಕೇಂದ್ರಬಿಂದುವಾಗಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಷಣದ ವೇಳೆ ಹಿಂಭಾಗದ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು, ಜನರೂ ಎದ್ದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು.

4. ಅಡ್ಡಿಯಾಗದ ಮಳೆ:ರಾಜ್ಯದಲ್ಲಿ ಕಳೆದೊಂದು ವಾರದಿಂದ ಎಡೆಬಿಡದ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದ್ದರೂ ಸಮಾವೇಶಕ್ಕೆ ಮಳೆ ಅಡ್ಡಿಯಾಗಲ್ಲ ಎನ್ನುವ ಆತ್ಮವಿಶ್ವಾಸದಲ್ಲೇ ಬಿಜೆಪಿ ನಾಯಕರು ಎಲ್ಲ ಸಿದ್ದತೆ ಮಾಡಿದ್ದರು. ಅವರ ನಿರೀಕ್ಷೆಯಂತೆ ಇಂದು ಮಳೆ ಬಿಡುವು ನೀಡಿ ಸಮಾವೇಶಕ್ಕೆ ಯಾವುದೇ ಅಡ್ಡಿ ಆತಂಕವಾಗದೆ ಸುಗಮವಾಗಿ ಕಾರ್ಯಕ್ರಮ ನಡೆಯಲು ಅನುವುಮಾಡಿಕೊಟ್ಟಿತು. 70 ಸಾವಿರಕ್ಕೂ ಹೆಚ್ಚಿನ ಆಸನ ವ್ಯವಸ್ಥೆ ಕಲ್ಪಿಸಿ ಪೂರ್ಣವಾಗಿ ಜರ್ಮನ್ ಟೆಂಟ್ ಮೂಲಕ ಮಳೆ ಬಂದರೂ ಸೋರದಂತೆ ವ್ಯವಸ್ಥೆ ಮಾಡಲಾಗಿತ್ತು.

5. ಕೇಸರಿಮಯ ವೇದಿಕೆ:ಇಡೀ ವೇದಿಕೆ ಸಂಪೂರ್ಣ ಕೇಸರಿಮಯವಾಗಿತ್ತು. ಪಕ್ಷದ ಧ್ವಜದ ಬಣ್ಣವನ್ನು ಪ್ರತಿಬಿಂಬಿಸುವಂತೆ ವೇದಿಕೆ ಹಸಿರುನಿಂದ ಕೂ ಮೇಲ್ಬಾಗದಲ್ಲಿ ಕೇಸರಿಯನ್ನು ಅಲಂಕರಿಸಲಾಗಿತ್ತು, ಕಮಲ ಅರಳುವ ಗ್ರಾಫಿಕ್ಸ್ ಮಾಡಿದ್ದು, ಅಲ್ಲಲ್ಲಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಿ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ವೇದಿಕೆ ಮೇಲೆ ಬಿಜೆಪಿ ನಾಯಕರು

6. ನಾಯಕಿಯರಿಗೆ ಮಗ್ಗದ ಸೀರೆ ಉಡುಗೊರೆ:ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಸಹ ಪ್ರಭಾವಿ ಡಿಕೆ ಅರುಣಾ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಗ್ಗದ ರೇಷ್ಮೆ ಸಿರೆ ಉಡುಗೊರೆಯಾಗಿ ನೀಡಲಾಯಿತು. ಕೇಂದ್ರದ ಪ್ರತಿನಿಧಿಯಾಗಿ ಆಗಮಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಮಗ್ಗದ ರೇಷ್ಮೆ ಸೇರಿಯ ಜೊತೆಗೆ ರೇಷ್ಮೆ ನೇಯುವ ಮಗ್ಗದ ಮಾದರಿನ್ನು ಉಡುಗೊರೆಯಾಗಿ ನೀಡಲಾಯಿತು.

7. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಗೈರು:ಜನಸ್ಪಂದನ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಬೇಕಿತ್ತು. ಅವರು ನೀಡಿದ್ದ ಎರಡು ದಿನಾಂಕದಲ್ಲಿಯೂ ಸಮಾವೇಶ ಆಯೋಜನೆ ಮಾಡಲು ಸಾಧ್ಯವಾಗದೆ ಮುಂದೂಡಿಕೆ ಮಾಡಲಾಗಿತ್ತು. ಜುಲೈ 28ಕ್ಕೆ ಸಮಯಾವಕಾಶ ನೀಡಿದ್ದರು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಕಾರಣದಿಂದ ಸಮಾವೇಶ ಮುಂದೂಡಿಕೆಯಾಯಿತು.

ಬಳಿಕ ಸೆಪ್ಟೆಂಬರ್ 8ರಂದು ಮತ್ತೆ ಸಮಯ ನೀಡಿದ್ದರು. ಆದರೆ ಸಚಿವ ಉಮೇಶ್ ಕತ್ತಿ ನಿಧನದಿಂದ ಶೋಕಾಚರಣೆ ಇದ್ದ ಕಾರಣ ಸಮಾವೇಶ ಮುಂದೂಡಿಕೆಯಾಯಿತು. ಹಾಗಾಗಿ ನಡ್ಡಾ ಅನುಪಸ್ಥಿತಿಯಲ್ಲಿ ಸರ್ಕಾರದ ಸಾಧನಾ ಸಮಾವೇಶವನ್ನು ಮಾಡಲಾಯಿತು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಇದೇ ಕಾರಣದಿಂದ ಇಂದು ಆಗಮಿಸಲಿಲ್ಲ. ಕೇಂದ್ರದ ಪರವಾಗಿ ಸ್ಮೃತಿ ಇರಾನಿ ಆಗಮಿಸಿದ್ದರು.

8. ರಿಪೋರ್ಟ್ ಕಾರ್ಡ್ ಬದಲು ಕಾಂಗ್ರೆಸ್ ವಿರುದ್ಧ ಟೀಕೆ:ಜನಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಬಿಜೆಪಿ ನಾಯಕರು, ಸರ್ಕಾರದ ಒಂದಷ್ಟು ಯೋಜನೆಗಳನ್ನು, ಕೋವಿಡ್ ನಿಯಂತ್ರಣ ಕುರಿತು ಮಾಡಿದ ಪ್ರಯತ್ನವನ್ನು ಪ್ರಸ್ತಾಪಿಸಿ ಬಹುಪಾಲು ಸಮಯವನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಲು ಟೀಕಿಸಲು ಬಳಸಿಕೊಂಡರು.

9. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ:ಬೃಹತ್ ಸಮಾವೇಶ ಆಯೋಜನೆ ಮಾಡಿದ್ದ ಬಿಜೆಪಿ ನಾಯಕರು ಸ್ವತಃ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರು. ಲಕ್ಷಾಂತರ ಜನ ಸೇರಿದ್ದ ಜಾಗದಲ್ಲಿ ಯಾವುದೇ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಪಕ್ಷದ ನಾಯಕರು ಸೇರಿದಂತೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ.

ಇದನ್ನೂ ಓದಿ:ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ಗೆ ಸಿಎಂ ಸವಾಲು

ABOUT THE AUTHOR

...view details