ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ನೇರವಾಗಿ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಒಂದು ವಾರದೊಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದ ನಂತರ ರಾಜ್ಯ ನಾಯಕತ್ವದ ವಿರುದ್ಧ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸುತ್ತಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಹೇಳಿಕೆ ನೀಡುತ್ತಿರುವುದಕ್ಕೆ ಕಾರಣ ಕೇಳಿ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ನೋಟಿಸ್ ಜಾರಿಗೊಳಿಸಿದ ಲಿಂಗರಾಜ್ ಪಾಟೀಲ್: ತಮಗೆ ಪಕ್ಷ ಸಾಕಷ್ಟು ಬಾರಿ ತಿಳಿ ಹೇಳಿದರೂ ಕೂಡ ತಾವು ಪದೇ ಪದೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ, ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ನೋಟಿಸನ್ನು ನೀಡಲಾಗಿದೆ. ಈ ನೋಟಿಸ್ ತಲುಪಿದ ಒಂದು ವಾರದೊಳಗಾಗಿ ತಾವು ಉತ್ತರವನ್ನು ಲಿಖಿತ ರೂಪದಲ್ಲಿ ನೀಡಬೇಕೆಂದು ಸೂಚಿಸಿ ಲಿಂಗರಾಜ್ ಪಾಟೀಲ್ ನೋಟಿಸ್ ಜಾರಿಗೊಳಿಸಿದ್ದಾರೆ.
ಬುಧವಾರ ಸ್ವಕ್ಷೇತ್ರ ಹೊನ್ನಾಳಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ರೇಣುಕಾಚಾರ್ಯ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಎಲ್ಲರನ್ನು ಮುಗಿಸಿಬಿಟ್ಟಿರಿ, ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದರು. ಆದರೆ ಅವರ ಕೈಗಳನ್ನು ಕಟ್ಟಿ ಹಾಕಿದ್ದರು ಎಂದು ಸ್ವಪಕ್ಷದವರ ವಿರುದ್ಧವೇ ಗುಟುರು ಹಾಕಿ ಅಣ್ಣಾಮಲೈ ಯಾರು? ಅವರಿಗೇಕೆ ಪಕ್ಷದ ಚುನಾವಣಾ ಉಸ್ತುವಾರಿ ಜವಾಬ್ದಾರಿ ಕೊಡಬೇಕಿತ್ತು ಎಂದು ಪ್ರಶ್ನಿಸಿದ್ದರು.