ಬೆಂಗಳೂರು:ಗುರುವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವಂತೆ ಬಿಜೆಪಿ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.
ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ವಿಪ್ ಜಾರಿಗೊಳಿಸಿದ್ದು, ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ವಿಶ್ವಾಸಮತದ ವಿರುದ್ಧ ಮತ ಚಲಾಯಿಸಬೇಕು ಎಂದು ವಿಪ್ ಜಾರಿಗೊಳಿಸಲಾಗಿದೆ.
ಬಿಜೆಪಿಯ ಎಲ್ಲಾ ಶಾಸಕರು ಕೂಡ ಯಲಹಂಕ ಸಮೀಪದ ರಮಾಡ ರೆಸಾರ್ಟ್ನಲ್ಲಿ ಇದ್ದರೂ ಮತದಾನದ ವೇಳೆ ಯಾರೂ ಕೂಡ ಅಡ್ಡ ಮತ ಚಲಾಯಿಸಬಾರದು ಎನ್ನುವ ಕಾರಣಕ್ಕೆ ವಿಪ್ ಜಾರಿಗೊಳಿಸಲಾಗಿದೆ. ಕನಿಷ್ಠ 12 ಶಾಸಕರು ಮುಂಬೈನಲ್ಲಿದ್ದು, ರಾಜೀನಾಮೆ ವಾಪಸ್ ಪಡೆಯಲು ನಿರಾಕರಿಸಿರುವ ಕಾರಣ ಬಹುತೇಕ ಅವರು ಮತದಾನದಿಂದ ದೂರ ಉಳಿಯುವುದು ಖಚಿತ. ರಾಮಲಿಂಗಾರೆಡ್ಡಿ ಕೂಡ ರಾಜೀನಾಮೆ ಹಿಂಪಡೆಯಲ್ಲ ಎಂದಿದ್ದಾರೆ.
ಸರ್ಕಾರ ಸೇಫ್ ಆಗಬೇಕಾದರೆ ಬಿಜೆಪಿಯ ಕನಿಷ್ಠ ಎಂಟು ಶಾಸಕರು ಸದನಕ್ಕೆ ಗೈರಾಗಬೇಕು. ಇಲ್ಲವೇ ಅಡ್ಡ ಮತ ಚಲಾಯಿಸಬೇಕು ಅಥವಾ ಅತೃಪ್ತ ಶಾಸಕರು ನಿರ್ಧಾರ ಬದಲಿಸಿ ರಾಜೀನಾಮೆ ವಾಪಸ್ ಪಡೆದು ಮತದಾನದಲ್ಲಿ ಭಾಗಿಯಾಗಿ ಸರ್ಕಾರದ ಪರ ಮತ ಚಲಾಯಿಸಬೇಕು. ಇದರಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯಲ್ಲ ಎನ್ನುವುದನ್ನು ಖಚಿತೊಡಿಸಿಕೊಂಡಿರುವ ಬಿಜೆಪಿ, ತನ್ನ ಸದಸ್ಯರು ಅಡ್ಡ ಮತದಾನ ಮಾಡದಂತೆ, ಸನದಕ್ಕೆ ಗೈರಾಗದಂತೆ ನೋಡಿಕೊಳ್ಳಲು ವಿಪ್ ಜಾರಿಗೊಳಿಸಿದೆ.