ಬೆಂಗಳೂರು: ಬಿಜೆಪಿ ದೇಶ ಆಳಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಬ್ರಿಟೀಷರ ವಿರುದ್ಧ ಹೋರಾಡಲು ಸೇವಾದಳ ಕಟ್ಟಲಾಯಿತು. ಸೇವಾ ದಳದ ಕಾರ್ಯಕರ್ತರನ್ನು, ಯಾರೇ ಗಾಂಧಿ ಟೋಪಿ ಹಾಕಿದವರು, ಇವರು ಸೇವಾ ದಳದವರೇ ಎಂದು ಗುರುತಿಸಿಕೊಳ್ಳುತ್ತಾರೆ. ಸೇವಾದಳ ಕಾಂಗ್ರೆಸ್ನ ಆಧಾರಸ್ತಂಬ ಇದ್ದಂತೆ. ಮಹಾತ್ಮಾ ಗಾಂಧಿ ನಾಯಕತ್ವದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಸೇವಾದಳದ ಕಾರ್ಯಕರ್ತರು ಹುತಾತ್ಮರಾಗಿದ್ದಾರೆ. ಕಾಂಗ್ರೆಸ್ ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟವರು. ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ ಎಂದು ಟೀಕಿಸಿದರು.
ಬಿಜೆಪಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಯಾರೊಬ್ಬರೂ ಮಡಿದಿಲ್ಲ. ಆದರೆ, ಅವರು ದೇಶ ಭಕ್ತಿ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತಾರೆ. ಇವತ್ತು ದೇಶ ಭಕ್ತಿ ಇದ್ದರೆ ಅದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ. ಕಾಂಗ್ರೆಸ್ ಬಹುತ್ವದಲ್ಲಿ ನಂಬಿಕೆ ಇಟ್ಟವರು. ನಾವು ವೈವಿಧ್ಯತೆಯಲ್ಲಿ ಏಕತೆ ಕಾಣುವವರು. ಸಮಗ್ರ ಭಾರತ ಒಂದು ದೇಶ, ಐಕ್ಯತೆ, ಜಾತ್ಯತೀತತೆ ಎಂಬುದರಲ್ಲಿ ನಂಬಿದವರಾಗಿದ್ದೇವೆ. ಇಂದು ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ ದೇಶ ಒಡೆಯುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಹಲವು ಕಲ್ಯಾಣ ಕಾರ್ಯಕ್ರಮ ಆಗಿದೆ. ನಮ್ಮ ಸರ್ಕಾರ ಕೂಡ ಕಲ್ಯಾಣ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ. ಆ ಮೂಲಕ ಬಡವರಿಗೆ ಸಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.
ಜನವರಿಯಲ್ಲಿ ಯುವನಿಧಿ ಗ್ಯಾರಂಟಿ ಜಾರಿ:ಹಿಂದಿನ ಅವಧಿಯಲ್ಲಿ ಜನರಿಗೆ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೆವು. ಈಗಲೂ ನಾವು ಪಂಚ ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಮುಂದಿನ ಜನವರಿ ಹೊತ್ತಿಗೆ ಐದನೇ ಗ್ಯಾರಂಟಿ ಯುವನಿಧಿ ಜಾರಿ ತರುತ್ತೇವೆ. ಈ ಗ್ಯಾರಂಟಿಗಳಿಂದ ರಾಜ್ಯದ ಸುಮಾರು 1.40 ಕೋಟಿ ಜನರಿಗೆ ಸಹಾಯವಾಗುತ್ತಿದೆ. 1.07 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2,000 ರೂ ಲಭಿಸುತ್ತಿದೆ ಎಂದರು.