ಬೆಂಗಳೂರು: ಸ್ಥಿರ, ಅಭಿವೃದ್ಧಿ ಪರ ಸರ್ಕಾರ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್, ಜೆಡಿಎಸ್ ತಮ್ಮ ತಮ್ಮಲ್ಲೇ ಕಚ್ಚಾಡುತ್ತಿರುವ ಪಕ್ಷಗಳು ಹಾಗಾಗಿ ರಾಜ್ಯದಲ್ಲಿ ಸುಸ್ಥಿರ, ಅಭಿವೃದ್ಧಿ ಪರ ಸರ್ಕಾರಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದರು. ರಾಜಾಜಿನಗರದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಂದಾಗ ಏನೇನಾಯ್ತು ಎನ್ನುವುದು ರಾಜ್ಯದ ಜನತೆ ನೋಡಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲಂತೂ ಧರ್ಮ ನೋಡಿ ಭಾಗ್ಯ ಕೊಡುತ್ತಿದ್ದರು ಎಂದರು.
ಸಿದ್ದರಾಮಯ್ಯ ಅವರಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲದಂತಾಗಿದೆ-ಅಶೋಕ್:ಮುಸ್ಲಿಂ ಬಾಂಧವರಲ್ಲಿ ಜಯಂತಿ ಮಾಡುವ ಕ್ರಮ ಇಲ್ಲ. ಆದರೆ ವೋಟಿನ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದರು. ಟಿಪ್ಪು ಸಹವಾಸ ಮಾಡಿದವರೆಲ್ಲರೂ ಕೆಡುಕನ್ನೇ ಅನುಭವಿಸಿದ್ದಾರೆ. ಟಿಪ್ಪು ಹೆಸರಿನ ಸಿನಿಮಾ ಮಾಡಲು ಹೋದಾಗ ಬೆಂಕಿ ಅನಾಹುತ ಆಯ್ತು, ಖಡ್ಗ ತಂದ ವಿಜಯ ಮಲ್ಯ ಜೈಲು ಸೇರುವಂತಾಯ್ತು. ಈಗ ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ ಅವರಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲದಂತಾಗಿದೆ ಎಂದು ಟೀಕಿಸಿದರು.
ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಪರಿವರ್ತನೆ ತಂದಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಿದ್ದೇವೆ. ಸದಾ ತೊಂದರೆ ನೀಡುತ್ತಿದ್ದ ಪಾಕಿಸ್ತಾನ ಊಟಕ್ಕೂ ಕಷ್ಟಪಡುವಂತಾಗಿದೆ. ಅಲ್ಲಿನ ಜನರೇ ಮೋದಿಯವರಂತಹ ಪ್ರಧಾನಮಂತ್ರಿ ಬೇಕು ಅನ್ನುತ್ತಿದ್ದಾರೆ. ರಾಹುಲ್ ಗಾಂಧಿ ಬೆಳಗಾವಿಗೆ ಪ್ರಚಾರಕ್ಕೆ ಬರುತ್ತಾರಂತೆ. ನಾವು ಅವರಿಗೆ ಬೆಂಗಳೂರಿಗೂ ಬನ್ನಿ ಅಂತ ವಿನಂತಿ ಮಾಡುತ್ತೇವೆ. ಯಾಕೆಂದರೆ ಅವರು ಕಾಲಿಟ್ಟಲ್ಲಿ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಒಂದೇ ಆಯ್ಕೆ ಅದು ಬಿಜೆಪಿ ಎಂದು ಹೇಳಿದರು.