ಬೆಂಗಳೂರು: ವಿಧಾನಸಭೆ ಜಂಟಿ ಅಧಿವೇಶನದ ಒಳಗಡೆಯೇ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಬಿಜೆಪಿಯ ವಿಳಂಬ ಧೋರಣೆಯಿಂದ ಹುಸಿಯಾಗಿದೆ. ವಿಧಾನ ಮಂಡಲ ಜಂಟಿ ಅಧಿವೇಶನಕ್ಕೂ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಜಂಟಿ ಅಧಿವೇಶನ ಆರಂಭವಾಗಿದ್ದು, ಬಿಜೆಪಿ ಪ್ರತಿಪಕ್ಷ ನಾಯಕನಿಲ್ಲದೆ ಪಾಲ್ಗೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರವನ್ನು ಕಳೆದುಕೊಂಡ ಬಳಿಕ ಪಕ್ಷದ ಹೈಕಮಾಂಡ್ ಕರ್ನಾಟಕದ ಬಿಜೆಪಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎನ್ನುವ ವಾದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಯ ವಿಳಂಬವೇ ನಿದರ್ಶನ. ಸಾಮಾನ್ಯವಾಗಿ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಹೊಸ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪ್ರತಿಪಕ್ಷ ನಾಯಕನ ಆಯ್ಕೆಯನ್ನು ಸಹ ವಿರೋಧ ಪಕ್ಷಗಳು ಮಾಡುತ್ತವೆ. ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕರ ಆಯ್ಕೆಯನ್ನು ಇದುವರೆಗೆ ಘೋಷಣೆ ಮಾಡಲು ಸಾಧ್ಯವಾಗಿಲ್ಲ.
ಇಂದಿನಿಂದ ಆರಂಭವಾಗುವ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನಕ್ಕೆ ಮುನ್ನವೇ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡುವ ನಿರೀಕ್ಷೆಗಳಿದ್ದವು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸಹ ವಾಪಸಾಗಿದ್ದಾರೆ. ಅಧಿವೇಶನ ಆರಂಭವಾಗುವ ಮುನ್ನ ಪ್ರತಿಪಕ್ಷ ನಾಯಕರ ಆಯ್ಕೆ ಪೂರ್ಣಗೊಳಿಸಲು ಬಿಜೆಪಿ ಹೈಕಮಾಂಡ್ ವಿಫಲವಾಗಿದೆ.
ಪ್ರತಿಪಕ್ಷ ನಾಯಕನ ಆಯ್ಕೆಗಾಗಿ ಬಿಜೆಪಿನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಚಿವರಾದ ಆರ್. ಅಶೋಕ್ ,ಎಸ್. ಸುರೇಶ್ ಕುಮಾರ್, ಡಾ. ಅಶ್ವತ್ಥನಾರಾಯಣ, ವಿ. ಸುನಿಲ್ ಕುಮಾರ್, ಅರವಿಂದ ಬೆಲ್ಲದ್ ಸೇರಿದಂತೆ ಹಲವರು ನಾಯಕರು ಪ್ರತಿಪಕ್ಷ ನಾಯಕನ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಇವರಲ್ಲಿ ಸರ್ವಾನುಮತದಿಂದ ಒಬ್ಬರನ್ನು ಆಯ್ಕೆ ಮಾಡುವುದು ಬಿಜೆಪಿಗೆ ಸವಾಲಿನ ಕೆಲಸವಾಗಿದೆ. ಯಾರನ್ನೇ ಆಯ್ಕೆ ಮಾಡಿದರೂ ಆಕಾಂಕ್ಷಿತರಿಂದ ಅಸಮಾಧಾನ ವ್ಯಕ್ತವಾಗಲಿದ್ದು, ಅದನ್ನು ನಿಭಾಯಿಸುವುದು ಬಿಜೆಪಿಗೆ ಕಷ್ಟವಾಗಿದೆ.